ವಿಕಲಚೇತನ ಮಕ್ಕಳೊಂದಿಗೆ ದೀಪಾವಳಿ ವಿಶಿಷ್ಟ ರೀತಿ ಆಚರಣೆ
ಕೋಲಾರ: ವಿಕಲಚೇತನ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸಮಾಜ ಮತ್ತು ಸಂಘ ಸಂಸ್ಥೆಗಳು ಗಮನ ನೀಡಬೇಕೆಂದು ನಗರಸಭೆ ಆಯುಕ್ತ ಜಗದೀಶ್ ತಿಳಿಸಿದರು.
ನಗರದ ಗಾಂಧಿವನದಲ್ಲಿ ಜಾಗೃತಿ ಸೇವಾ ಸಂಸ್ಥೆ ಆಶ್ರಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ ನಾವೂ ನಿಮ್ಮೊಂದಿಗೆ ವಿಕಲಚೇತನ ಮತ್ತು ಅನಾಥ ಮಕ್ಕಳೊಂದಿಗೆ ಬೆಳಕಿನ ಹಬ್ಬ ದೀಪಾವಳಿ ಆಚರಣೆ ಉದ್ಘಾಟಿಸಿ ಮಾತನಾಡಿದರು. ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಬದುಕಲು ಸಮಾನ ಅವಕಾಶಗಳು ಇವೆ. ಅಂಗವಿಕಲರಿಗೆ ಅನುಕಂಪ ಬೇಕಾಗಿಲ್ಲ, ಸಾಮಾನ್ಯ ನಾಗರಿಕರಂತೆ ಬದುಕಲು ಅವಕಾಶ ನೀಡಬೇಕೆಂದು ತಿಳಿಸಿದರು. ಡಿವೈಎಸ್ಪಿ ಅಶೋಕ್ಕುಮಾರ್, ವಿಕಲಾಂಗರಿಗೆ ಸ್ವಾವಲಂಬನೆಯ ಜೀವನ ರೂಪಿಸಲು ಅನುವಾಗುವ ರೀತಿ ಸರ್ಕಾರದ ಯೋಜನೆಗಳ ಸದ್ಬಳಕೆಗೆ ಮನವಿ ಮಾಡಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ. ಗೋಪಿನಾಥ್, ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಎಲ್ಲರನ್ನು ಒಗ್ಗೂಡಿಸುವುದಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಆಡಂಬರ, ಅದ್ಧೂರಿ ಮನೋಭಾವದಿಂದ ಮಹತ್ವವನ್ನೇ ಕಳೆದುಕೊಳ್ಳುತ್ತಿವೆ ಎಂದು ವಿಷಾದಿಸಿದರು.ಜಾಗೃತಿ ಸೇವಾ ಸಂಸ್ಥೆ, ವಿಕಲಾಂಗದ ಮಕ್ಕಳೊಂದಿಗೆ ದೀಪಾವಳಿ ಆಚರಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದೆ ಎಂದರು.
ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬರಲು ಎಲ್ಲರ ಮನದಲ್ಲೂ ನಾವು ನಿಮ್ಮೊಂದಿಗೆ ಎಂಬ ಮನೋಭಾವ ಮೂಡಲಿ ಎಂದು ಆಶಿಸಿ, ವಿಕಲಾಂಗದರಿಗಾಗಿ ತಂತ್ರಜ್ಞಾನ ಬಳಸಿ, ಶಿಕ್ಷಣ ನೀಡಿ ಸ್ವಾವಲಂಬಿಗಳನ್ನಾಗಿಸುವ ಅಗತ್ಯವಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಟಿ.ಎಂ. ಶಿವಣ್ಣ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್ ಮಾತನಾಡಿದರು.
ವಕೀಲ ಕೆ.ಆರ್. ಧನರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ದೀಪಾವಳಿ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳೊಂದಿಗೆ ವಿಕಲಚೇತನ ಮಕ್ಕಳು ಎಲ್ಲರಂತೆ ಹೊಸ ಬಟ್ಟೆ ಧರಿಸಿ ಸಿಹಿ ತಿಂದು ಹಬ್ಬವನ್ನು ಆಚರಿಸಲಿ ಎಂಬ ಉದ್ದೇಶದಿಂದ ವಿಕಲಚೇತನ ಮಕ್ಕಳೊಂದಿಗೆ ದೀಪಾವಳಿ ಆಚರಿಸಲಾಗುತ್ತಿದೆ ಎಂದರು.ಅಂತರಗಂಗಾ ಸಂಸ್ಥೆಯ ವಿಕಲಾಂಗ ಮಕ್ಕಳು ಶರತ್ ನೇತೃತ್ವದಲ್ಲಿ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದರು.