13ರಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ
ಕೋಲಾರ: ಶಾಲೆಯಿಂದ ಹೊರಗುಳಿದ 6 ವರ್ಷದಿಂದ 16 ವರ್ಷದೊಳಗಿನ ಮಕ್ಕಳ ಸಮೀಕ್ಷೆ ಕಾರ್ಯ ನ.13 ರಿಂದ 17ರವರೆಗೆ ಐದು ದಿನ ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.
2009 ಏಪ್ರಿಲ್ನಿಂದ ಪ್ರಾಥಮಿಕ ಶಿಕ್ಷಣವು 6 ವರ್ಷದಿಂದ 16 ವರ್ಷದ ಮಕ್ಕಳಿಗೆ ಮೂಲಭೂತ ಹಕ್ಕಾಗಿದೆ. ಆರ್.ಟಿ.ಇ ಕಾಯಿದೆ ಸೆಕ್ಷನ್ 4ರ ರೀತ್ಯ ಯಾವುದೇ ಮಗು ಶಾಲೆಯಿಂದ ಹೊರಗುಳಿಯದೆ ಇರುವಂತೆ ಗಮನಿಸಿ ಎಲ್ಲಾ ಮಕ್ಕಳಿಗೂ ಪ್ರಾಥಮಿಕ ಶಿಕ್ಷಣವನ್ನು ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯವೂ ಆಗಿದೆ.
ರಾಜ್ಯ ಹೈಕೋರ್ಟ್ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಒಂದು ಸಮಗ್ರ ಸಮೀಕ್ಷೆ ನಡೆಸುವಂತೆ ಸಲಹೆ ನೀಡಿರುವುದನ್ನು ಸಕಾರಗೊಳಿಸಲು ರಾಜ್ಯ ಸರ್ಕಾರ ಮುಂದಾಗಿರುವುದಲ್ಲದೆ, ಸಮಗ್ರ ಸಮೀಕ್ಷೆಯ ಜೊತೆಗೆ ಈ ಬಾರಿ ಮಕ್ಕಳ ಜಾತಿಯನ್ನು ಸಹ ಪಟ್ಟಿ ಮಾಡಲು ಕಾರ್ಯಸೂಚಿಯನ್ನು ಸಿದ್ಧಪಡಿಸಿದೆ.
ಶಾಲಾ ಮಟ್ಟದಲ್ಲಿ 2011-12ರಿಂದ 2012-13 ಹಾಗೂ 2012-13 ರಿಂದ 2013-14ರ ಮಧ್ಯದ ಅವಧಿಯಲ್ಲಿ ಶಾಲಾ ದಾಖಲೆಗಳಿಂದ 1 ರಿಂದ 10ನೇ ತರಗತಿಯಲ್ಲಿ ನಾಪತ್ತೆಯಾದ ಮಕ್ಕಳ ಪಟ್ಟಿಯನ್ನು ತಯಾರಿಸಿಕೊಂಡು ಸಮಗ್ರ ಸಮೀಕ್ಷೆಗಾಗಿ ಸಿಬ್ಬಂದಿ ನಿಯೋಜಿಸಿಕೊಂಡಿದೆ. ಜನವಸತಿ ಪ್ರದೇಶದ ಕುಟುಂಬಗಳಲ್ಲಿ, ವಿಳಾಸ ಹಾಗೂ ಇತರೆ ಶಾಲಾ ಆದಾರಿತ ಮಾಹಿತಿಗಳ ಮೂಲಕ ನಾಪತ್ತೆಯಾದ ಮಕ್ಕಳ ಕುರಿತು ದೃಢೀಕರಣ ಹಾಗೂ ಪರಿಶೀಲನೆಗಾಗಿ ಪೈಲಟ್ ಕ್ಲಸ್ಟರ್ಗಳಿಗೆ ಮಾಹಿತಿ ತಲುಪಿಸಲು ಸಿದ್ಧತೆ ನಡೆದಿದೆ.
ಶಾಲೆಗಳಿಗೆ ದಾಖಲೆಯಾಗಿ ಶಾಲೆಯಿಂದ ಹೊರಗುಳಿದ, ಹಿಂದೆಂದೂ ಶಾಲೆ ಸೇರಿರದ ಹಾಗೂ ಶಾಲೆ ಬಿಟ್ಟು ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಕ್ಕಳ ಜಾಡನ್ನು ಪತ್ತೆ ಮಾಡಲು ಕ್ರಿಯಾ ಯೋಜನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಜಂಟಿಯಾಗಿ ರೂಪಿಸಿದೆ.
70 ಸಾವಿರ ಶಾಲೆಗಳಿಗೆ ಭೇಟಿ: ಅಂದಾಜಿನ ಪ್ರಕಾರ ರಾಜ್ಯದ ಸುಮಾರು 70 ಸಾವಿರ ಶಾಲೆಗಳಲ್ಲಿ ದಾಖಲೆಗಳ ಪರಿಶೀಲನೆ ಹಾಗೂ 90 ಲಕ್ಷ ಕುಟುಂಬಗಳಿಂದ ಮಾಹಿತಿ ಸಂಗ್ರಹಣೆ ಮಾಡಿ ಶಾಲೆ ಬಿಟ್ಟ ಮಕ್ಕಳ ಪಟ್ಟಿ ಸಿದ್ಧಪಡಿಸಲು ನ.13 ರಿಂದ 17ರ ತನಕ ಸಮಗ್ರ ಸಮೀಕ್ಷೆ ನಡೆಸಲಾಗುವುದು.
ನಗರ ಪ್ರದೇಶದ ಕೊಳಗೇರಿ, ಸಂಕೀರ್ಣ ಕಟ್ಟಡಗಳು ನಿರ್ಮಾಣಗೊಳ್ಳುತ್ತಿರುವ ಪ್ರದೇಶಗಳು, ಬಸ್ ಮತ್ತು ರೇಲ್ವೆ ನಿಲ್ದಾಣಗಳು, ಹೊಟೇಲ್, ಗಣಿಗಾರಿಕೆ ಮತ್ತು ಕ್ವಾರಿಗಳ ಪ್ರದೇಶ, ಹೆದ್ದಾರಿ ಅಕ್ಕ ಪಕ್ಕದ ಪ್ರದೇಶಗಳಲ್ಲಿ ಸಮೀಕ್ಷೆ ಕಾರ್ಯ ನಡೆಯುತ್ತದೆ.
ಇದೇ ರೀತಿ ಗ್ರಾಮಾಂತರ ಪ್ರದೇಶದ ಗುಡ್ಡಗಾಡು ಪ್ರದೇಶ, ಬುಡಕಟ್ಟು ಜನಾಂಗ ವಾಸಿಸುವ ಸ್ಥಳ, ಕುಗ್ರಾಮ, ಪ್ರವಾಹ ಪೀಡಿತ ಪ್ರದೇಶಗಳು, ವಲಸೆ ಕುಟುಂಬಗಳು ಇರುವ ಸ್ಥಳಗಳು, ನೀರಾವರಿ, ತೋಟಗಾರಿಕೆ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
4062 ಕ್ಲಸ್ಟರ್ಗಳ ನೇಮಕ: ಗ್ರಾಮಾಂತರ ಪ್ರದೇಶದಲ್ಲಿನ ವಲ್ನರಬಲ್ ಕ್ಲಸ್ಟರ್ಗಳ ಸಂಖ್ಯೆ 2136, ನಗರ ಪ್ರದೇಶದಲ್ಲಿ 686, ಗ್ರಾಮಾಂತರ ಪ್ರದೇಶದಲ್ಲಿನ ವಲ್ನರಬಲ್ ಕ್ಲಸ್ಟರ್ಗಳ ಸಂಖ್ಯೆ 679, ಸಾಮಾನ್ಯ ಕ್ಲಸ್ಟರ್ಗಳು 561 ಸೇರಿ ರಾಜ್ಯದಲ್ಲಿ ಒಟ್ಟು 4062 ಕ್ಲಸ್ಟರ್ಗಳನ್ನು ಗುರುತಿಸಲಾಗಿದೆ. ಈ ಕ್ಲಸ್ಟರ್ಗಳ ಮೂಲಕ ರಾಜ್ಯದ 90 ಲಕ್ಷ ಕುಟುಂಬಗಳನ್ನು ಕುಟುಂಬ ಸಮೀಕ್ಷೆಗೆ ಒಳಪಡಿಸಲಾಗಿದೆ.
ಮಕ್ಕಳ ಸಮೀಕ್ಷೆಗಾಗಿ ಸರ್ಕಾರ ಜಿಲ್ಲಾವಾರು ಸಮಿತಿಗಳನ್ನು ರಚನೆ ಮಾಡಿದೆ. ಪ್ರತಿಯೊಂದು ಜಿಲ್ಲೆಯಲ್ಲಿ ಆ ಜಿಲ್ಲೆಯ ಜಿಲ್ಲಾಧಿಕಾರಿ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜಿ.ಪಂ ಸಿಇಒ ಉಪಾಧ್ಯಕ್ಷರಾಗಿ, ಡಿಡಿಪಿಐ ಸದಸ್ಯ ಕಾರ್ಯದರ್ಶಿಯಾಗಿ ಹಾಗೂ ಡಯಟ್ ಪ್ರಾಂಶುಪಾಲರು, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಪೊಲೀಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಸರ್ವ ಶಿಕ್ಷಣ ಅಭಿಯಾನದ ಅಧಿಕಾರಿ, ಎನ್.ಜಿ.ಓಗಳ ಇಬ್ಬರು ಪ್ರತಿನಿಧಿಗಳು ಹಾಗೂ ಜಿಲ್ಲಾ ಹಂತದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರತಿನಿದಿಗಳು ಸಮಿತಿಯ ಸದಸ್ಯರಾಗಿರುತ್ತಾರೆ.
ಇದೇ ರೀತಿ ಪ್ರತಿಯೊಂದು ತಾಲೂಕುಗಳಲ್ಲೂ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಸಮೀಕ್ಷೆಗಾಗಿ ಪ್ರತಿ ತಂಡದಲ್ಲಿ ಇಬ್ಬರು ಶಿಕ್ಷಕರು, ಇತರೆ ಇಲಾಖೆಗಳ ಒರ್ವ ಸದಸ್ಯ ಹಾಗೂ ಸರ್ಕಾರೇತರ ಸಂಘ ಸಂಸ್ಥೆ, ಸ್ಥಳೀಯ ಯುವಕ, ಯುವತಿ, ಸ್ತ್ರೀ ಶಕ್ತಿ ಸಂಘ, ಸಾಮಾಜಿಕ ಕಾರ್ಯಕರ್ತರು ಇಬ್ಬರು ಕಾರ್ಯ ನಿರ್ವಹಿಸಲಿದ್ದಾರೆ.
ಪ್ರತಿ 10 ಸಮೀಕ್ಷಾ ತಂಡಗಳಿಗೆ ಸಮೀಕ್ಷೆ ನಡೆಸುವ ಪ್ರದೇಶದಲ್ಲಿನ ಪ್ರೌಢಶಾಲಾ ಸಹ ಶಿಕ್ಷಕರೊಬ್ಬರನ್ನು ಮೇಲ್ವಿಚಾರಕನ್ನಾಗಿ ನೇಮಿಸಲಾಗಿದೆ. ಸಮೀಕ್ಷೆಗಾಗಿ ನಿಯೋಜಿಸಲ್ಪಟ್ಟಿರುವ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಒಂದು ವಾರ ರಾಜ್ಯ ಮಟ್ಟ,ಜಿಲ್ಲಾ ಮಟ್ಟ, ತಾಲೂಕು ಮಟ್ಟದಲ್ಲಿ ತರಬೇತಿ ನೀಡಲಾಗುತ್ತಿದೆ.
ಪ್ರತಿ ಸಮೀಕ್ಷೆದಾರರಿಗೆ ಹಾಗೂ ಪ್ರತಿ ಮೇಲ್ವಿಚಾರಕರಿಗೆ ಪ್ರತಿ ದಿನಕ್ಕೆ 50 ರು. ಭತ್ಯೆ ನಿಗದಿಪಡಿಸಿದೆ. ಜನಪ್ರತಿನಿಧಿಗಳನ್ನು ಸಹ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸುವಂತೆ ಸರ್ಕಾರ ತಿಳಿಸಿದೆ. ಸಮೀಕ್ಷಾ ದಿನಗಳಲ್ಲಿ ಶಾಲೆಗಳಿಗೆ, ಶಿಕ್ಷಕರಿಗೆ ಯಾವುದೇ ರೀತಿಯ ರಜೆ ನೀಡದಂತೆ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆಯಲ್ಲದೆ, ನಗರ ಮತ್ತು ಅರೆ ನಗರ ಪ್ರದೇಶಗಳಲ್ಲಿ ಇರುವ ಬೀದಿ ಮಕ್ಕಳು, ಅನಾಥ ಮಕ್ಕಳು ಇತ್ಯಾದಿ ರೀತಿಯ ಮಕ್ಕಳ ಸಮೀಕ್ಷೆಯನ್ನು ರಾತ್ರಿ ವೇಳೆ ಮಾಡುವಂತೆ ತಿಳಿಸಿದ್ದು ಸಮೀಕ್ಷೆ ಕಾರ್ಯಕ್ಕೆ ನಿಯೋಜನೆಗೊಳ್ಳುವ ಮಹಿಳಾ ಸಿಬ್ಬಂದಿಗೆ ಇದರಿಂದಾಗುವ ಅನಾನುಕೂಲಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆಗಾಗಿ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಯ ಜಿಲ್ಲಾ ಸಹಾಯವಾಣಿಗಳನ್ನು ಸಹ ಸ್ಥಾಪಿಸಿದೆ.
ಪಾ.ಶ್ರೀ. ಅನಂತರಾಮ್