ಕನ್ನಡದ ಕೆಲಸಕ್ಕೆ ಕಂಕಣ ಬದ್ಧರಾಗಿ: ಕೋಗಿಲಹಳ್ಳಿ ಕೃಷ್ಣಪ್ಪ
ಕೆಜಿಎಫ್: ಗಡಿಭಾಗ ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ಕನ್ನಡದ ಅಭಿವೃದ್ಧಿ ಜತೆಗೆ, ಕನ್ನಡ ವಾತಾವರಣ ಮೂಡಿಸಲು ಕನ್ನಡಪರ ಸಂಘಟನೆಗಳು, ಹೋರಾಟಗಾರರು ಕಂಕಣ ತೊಡಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಕೋಗಿಲಹಳ್ಳಿ ಕೃಷ್ಣಪ್ಪ ಕಿವಿಮಾತು ಹೇಳಿದರು. ಕೆಜಿಎಫ್ನ ಡಾ.ಟಿ.ತಿಮ್ಮಯ್ಯ ತಾಂತ್ರಿಕ ವಿದ್ಯಾಲಯದಲ್ಲಿ ಜಿವಿಐಟಿ ಟ್ರಸ್ಟ್ನ ಅಧ್ಯಕ್ಷ ಡಾ.ಟಿ.ತಿಮ್ಮಯ್ಯ ನೇತೃತ್ವದಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅದೇ ರೀತಿ ಇಂದಿನ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ನೆಲ ಜಲವನ್ನು ಉಳಿಸಲು ಮತ್ತು ಕನ್ನಡ ನಾಡಿನ ಮಹತ್ವವನ್ನು ಎತ್ತಿತೋರಿಸಬೇಕು ಎಂದರು. ಕೆಜಿಎಫ್ ಕ್ಷೇತ್ರ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಅಂಟಿಕೊಂಡಿದ್ದು,ಈ ಭಾಗದಲ್ಲಿ ಕನ್ನಡ ಅಭಿವೃದ್ಧಿಗೆ ಮತ್ತು ಕನ್ನಡಮಯ ವಾತಾವರಣ ನಿರ್ಮಿಸಲು ಸರ್ಕಾರ, ಜನಪ್ರತಿನಿಧಿಗಳು ಮತ್ತು ಕನ್ನಡಪರ ಸಂಘಟನೆಗಳು ಕಾರ್ಯಕ್ರಮ ನಡೆಸಲು ಮುಂದಾಗಬೇಕಿದೆ ಎಂದರು. ಹಾಸ್ಯ ಕಲಾವಿದರಾದ ರಿಚರ್ಡ್ ಲೂಯಿಸ್ ಮತ್ತು ಮೈಸೂರು ಆನಂದ್ ನಗೆ ಹಬ್ಬದ ಮೂಲಕ ರಸದೌತಣ ನೀಡಿದರು. ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷ ಪಲ್ಲವಿಮಣಿ, ಜಿವಿಐಟಿ ಟ್ರಸ್ಟ್ ಸದಸ್ಯ ವೆಂಕಟಕೃಷ್ಣಾರೆಡ್ಡಿ, ಪ್ರಾಂಶುಪಾಲ ಸೈಯದ್ಆರೀಫ್, ಸೇರಿದಂತೆ ಶಿಕ್ಷಕರು, ಕನ್ನಡಪರ ಹೋರಾಟಗಾರರು, ಮುಖಂಡರು ವಿದ್ಯಾರ್ಥಿಗಳು ಭಾಗವಹಿಸಿದ್ದರು.