ಚರಂಡಿಗೆ ಕಸಕಡ್ಡಿ: ನೆಮ್ಮದಿಗೆ ಅಡ್ಡಿ
ಬಾಗೇಪಲ್ಲಿ: ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ ಗ್ರಾಮದ ಬಹುತೇಕ ಚರಂಡಿಗಳಲ್ಲಿ ಕಸ ಕಡ್ಡಿ ಹಾಗೂ ಹೂಳು ತುಂಬಿಕೊಂಡಿದ್ದು ಸರಾಗವಾಗಿ ಹರಿಯಬೇಕಾಗಿದ್ದ ಕೊಳಚೆ ನೀರು ನಿಂತಲ್ಲೇ ನಿಂತಿರುವುದರಿಂದ ದುರ್ನಾತ ಬೀರುತ್ತಿದೆ ಎಂದು ತಾಲೂಕಿನ ಚೇಳೂರಿನ ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲೂಕಿನ ಹೋಬಳಿ ಕೇಂದ್ರವಾಗಿರುವ ಚೇಳೂರು ಗ್ರಾಮದ ಬಹುತೇಕ ಚರಂಡಿಗಳಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆಯದೆ ಗ್ರಾಪಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರ ಪರಿಣಾಮ ಕೊಳಚೆಯ ನೀರು ಸರಾಗವಾಗಿ ಹರಿಯದೇ ದುರ್ನಾತ ಬೀರುತ್ತಿದ್ದು ಈ ಪ್ರದೇಶದಲ್ಲಿ ಓಡಾಡುವಂತಹ ಹಾಗೂ ಈ ಚರಂಡಿಯ ಅಕ್ಕಪಕ್ಕದಲ್ಲಿ ವಾಸಿಸುವಂತಹ ನಾಗರೀಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿಗಳಲ್ಲಿ ತುಂಬಿಕೊಂಡಿರುವಂತಹ ಕಸ, ಕಡ್ಡಿ ಮತ್ತು ಹೂಳಿನಿಂದ ಹರಿಯದ ಕೊಳಚೆಯ ನೀರಿನಿಂದ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಚಿಕೂನ್ಗುನ್ಯಾ, ಮಲೇರಿಯಾದಂತಹ ಕಾಯಿಲೆಗಳು ಹರಡುವ ಭೀತಿ ಉಂಟಾಗಿದೆ.
ಗ್ರಾಮದ ಬೆಸ್ಕಾಂ ಕಚೇರಿ ಹಿಂದೆ ಚರಂಡಿ ತೆರೆದು ಸುಮಾರು 6 ತಿಂಗಳಾದರೂ ಇದುವರೆಗೂ ದುರಸ್ಥಿಪಡಿಸಿಲ್ಲ, ಚರಂಡಿಯಲ್ಲಿ ಕಸ ಕಡ್ಡಿ ತುಂಬಿರುವ ಹಿನ್ನೆಲೆಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯದೇ ನಿಂತಲ್ಲೇ ನಿಂತು ಗಬ್ಬುನಾತ ಬೀರುತ್ತಿದೆ. ಇದೇ ಚರಂಡಿಯಲ್ಲೇ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ಲೈನ್ ಹಾದು ಹೋಗಿರುವುದರ ಜೊತೆಗೆ ಗೇಟ್ವಾಲ್ ಅನ್ನು ಸಹ ಇದೇ ಚರಂಡಿ ಬದಿಯಲ್ಲಿಯೇ ಇದೆ. ಇದರಿಂದ ಈ ಭಾಗದ ಬಹುತೇಕ ಗ್ರಾಮಸ್ಥರು ಈ ಪೈಪ್ನ ಮೂಲಕ ಬರುವ ನೀರನ್ನು ಕುಡಿಯುವುದರಿಂದ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಗ್ರಾಪಂ ಅಧಿಕಾರಿಗಳಿಗೆ ಅನೇಕ ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದ ಸ್ವಚ್ಛತೆ ಕಾಪಾಡಬೇಕಾಗಿರುವ ಗ್ರಾಪಂ ಅಧಿಕಾರಿಗಳು ಗ್ರಾಮದ ಸ್ವಚ್ಛತೆಗೂ ನಮಗೂ ಯಾವುದೇ ರೀತಿಯ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈಗಲಾದರೂ ಅಧಿಕಾರಿಗಳು ಇತ್ತ ಗಮನ ಹರಿಸಿ ಕಸ ಕಡ್ಡಿ ಹಾಗೂ ಹೂಳು ತುಂಬಿಕೊಂಡಿರುವ ಚರಂಡಿಗಳಲ್ಲಿ ಹೂಳನ್ನು ತೆಗೆಸಿ ಸರಾಗವಾಗಿ ಕೊಳಚೆ ನೀರನ್ನು ಹರಿಸುವಂತೆ ಹಾಗೂ ಚರಂಡಿಗಳಲ್ಲಿ ಅಳವಡಿಸಿರುವ ಕುಡಿಯುವ ನೀರಿನ ಗೇಟ್ವಾಲ್ ಬೇರೆ ಕಡೆಗೆ ಬದಲಿಸುವ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.