ರಕ್ತಚಂದನ ಮರದ ತುಂಡುಗಳ ಸಾಗಾಟ: ಇಬ್ಬರ ಬಂಧನ
ಕೆಜಿಎಫ್: ಆಂಧ್ರಪ್ರದೇಶದ ವಿ.ಕೋಟದಿಂದ ಅಕ್ರಮವಾಗಿ ಮಾಲೂರು ಕಡೆಗೆ ಲಕ್ಷಾಂತರ ಬೆಲೆ ಬಾಳುವ ರಕ್ತಚಂದನ ಮರದ ತುಂಡುಗಳನ್ನು ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ಬೇತಮಂಗಲ ಪೊಲೀಸರು ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿರುವ ಘಟನೆ ಸುಂದರಪಾಳ್ಯ ಗ್ರಾಮದ ಬಳಿ ನಡೆದಿದೆ. ಆಂಧ್ರಪ್ರದೇಶದ ಚಿತ್ತೂರು, ಪಲಮನೇರು, ವಿ.ಕೋಟ ಮುಂತಾದ ಪ್ರದೇಶಗಳಿಂದ ನಿರಂತರಾಗಿ ಕರ್ನಾಟಕ, ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಿಗೆ ಗಂಧದ ಮರಗಳು, ರಕ್ತಚಂದನ ಮರಗಳು ಹಾಗೂ ಇತರೆ ಅಕ್ರಮ ವಸ್ತುಗಳನ್ನು ಸಾಗಾಟ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕಳೆದ ರಾತ್ರಿ ವಿ.ಕೋಟ ಪ್ರದೇಶದಿಂದ ಲಕ್ಷಾಂತರ ಬೆಲೆ ಬಾಳುವ ರಕ್ತಚಂದನ ಮರದ ತುಂಡುಗಳನ್ನು ಒಂದು ಟಾಟಾ ಎಸ್ ವಾಹನದಲ್ಲಿ ಮಾಲೂರು ಕಡೆಗೆ ಸಾಗಿಸಲಾಗುತ್ತಿರುವುದಾಗಿ ಬೇತಮಂಗಲ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ವಾಹನ ಸಮೇತ ಸುಮಾರು 2 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ರಕ್ತಚಂದನ ಮರಗಳನ್ನು ವಶಪಡಿಸಿಕೊಂಡು ಮೂವರು ಆರೋಪಿಗಳ ಪೈಕಿ ಆಂಧ್ರಪ್ರದೇಶದ ವಿ.ಕೋಟ ಮೂಲದವರಾದ ನಾಗರಾಜು(35) ಹಾಗೂ ನಾಗರಾಜಪ್ಪ(30) ಎಂಬುವರನ್ನು ಬಂಧಿಸಿದ್ದು ಮತ್ತೊಬ್ಬ ಆರೋಪಿ ಕತ್ತಲಲ್ಲಿ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಬೇತಮಂಗಲ ಠಾಣಾ ಪಿಎಸ್ಐ ಸುರೇಶ್ ಅವರು ತನಿಖೆಯನ್ನು ಕೈಗೊಂಡಿದ್ದಾರೆ.