ಶಾದಿಭಾಗ್ಯ ಎಲ್ಲಾ ಬಡ ಹೆಣ್ಣು ಮಕ್ಕಳಿಗೂ ವಿಸ್ತರಿಸಲು ಒತ್ತಾಯ
ಕೋಲಾರ: ರಾಜ್ಯ ಸರ್ಕಾರ ಶಾದಿ ಭಾಗ್ಯ ಯೋಜನೆಯನ್ನು ಎಲ್ಲಾ ವರ್ಗದ ಬಡ ಹೆಣ್ಣು ಮಕ್ಕಳಿಗೆ ವಿಸ್ತರಣೆ ಮಾಡಬೇಕೆಂದು ಒತ್ತಾಯಿಸಿ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆಯ ಜಿಲ್ಲಾ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸರ್ಕಾರ ಜಾರಿಗೆ ತಂದಿರುವ ಯೋಜನೆ ಬಡ ಕುಟುಂಬದಲ್ಲಿ ಹುಟ್ಟಿರುವ ಹೆಣ್ಣು ಮಕ್ಕಳಿಗೆ ಉತ್ತಮ ಯೋಜನೆಯಾಗಿದ್ದು ಈ ಯೋಜನೆ ರಾಜ್ಯದ ಎಲ್ಲಾ ವರ್ಗದ ಬಡ ಹೆಣ್ಣು ಮಕ್ಕಳಿಗೆ ಜಾರಿಯಾಗಬೇಕು.
ಇಲ್ಲವಾದರೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯನ್ನು ಎಲ್ಲಾ ವರ್ಗದ ಬಡ ಹೆಣ್ಣು ಮಕ್ಕಳಿಗೆ ಜಾರಿ ಮಾಡದಿದ್ದರೆ ಹೋರಾಟ ನಡೆಸುವುದಾಗಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ-ದೆಹಲಿಯ ಕೋಲಾರ ಜಿಲ್ಲೆ ಅಧ್ಯಕ್ಷ ಕೆ.ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೆ.ಎಸ್. ನಾಗವೇಣಿ, ಸಿ.ಡಿ. ರಾಮಚಂದ್ರಗೌಡ, ಸಂಘಟನಾ ಕಾರ್ಯದರ್ಶಿ ಬೆಟ್ಟಹೊಸಪುರ ಆರ್. ಶ್ರೀನಿವಾಸ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾಗೇರಿ ನಾರಾಯಣಸ್ವಾಮಿ, ಸಹಾಯಕ ಕಾರ್ಯದರ್ಶಿ ಮಲ್ಲಿಕಾರ್ಜುನ ಮತ್ತು ಟಿ.ಎನ್. ರಮೇಶ್ ನಿಯೋಗದಲ್ಲಿ ಇದ್ದರು.