ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೋಡಿ ಸ್ವಾಮಿ, ಈ ರಸ್ತೆ ಇರೋದು ಹೀಗೆ...

Rashmi Kasaragodu
Updated On : 7 Nov 2013, 12:54 pm

ಕ.ಪ್ರ.ವಾರ್ತೆ    ಗುಡಿಬಂಡೆ    ನ 6
ರಾ.ಹೆ. 7 ರಿಂದ ಗುಡಿಬಂಡೆಗೆ ಸಂಪರ್ಕ ಕಲ್ಪಿಸುವ ಪಿ.ಜಿ. ರಸ್ತೆ ಹಳ್ಳ ಕೊಳ್ಳಗಳಿಂದ ಕೂಡಿ ವಾಹನ ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿದೆ. ಆದ್ದರಿಂದ ಕೆರೆ ಏರಿ ಮೇಲೆ ಸಂಚಾರ ಮಾಡೋ ವಾಹನ ಚಾಲಕರೇ ಹುಷಾರ್, ಅಪ್ಪಿತಪ್ಪಿ ಜೋರಾಗಿ ಬಂದರೆ ಜೋಕೆ. ಯಾಕೆಂದರೆ ಕೆರೆ ಏರಿಯ ಬಳಿ ತಡೆಗೋಡೆಯೇ ಇಲ್ಲ!?
ಪಟ್ಟಣದ ಹೊರವಲಯದ ಅಮಾನಿ ಬೈರಸಾಗರದ ಕೆರೆ ಏರಿ ಮೇಲೆ ಹಾದು ಹೋಗುವ ರಸ್ತೆ ಕೆಲವು ಭಾಗಗಳಲ್ಲಿ ಡಾಂಬರು ಕಿತ್ತುಹೊಗಿ ದೊಡ್ಡ ಪ್ರಮಾಣದ ಗುಣಿಗಳು ಬಿದ್ದಿದ್ದು, ರಸ್ತೆ ಮೇಲೆ ಸಂಚರಿಸುವ ವಾಹನ ಸವಾರರು ತಮ್ಮ ಪ್ರಾಣವನ್ನು ಅಂಗೈಯಲ್ಲಿ ಹಿಡಿದುಕೊಂಡು ವಾಹನಗಳನ್ನು ಚಲಾಯಿಸುವ ಪರಿಸ್ಥಿತಿ ಉಂಟಾಗಿದೆ. ಜೊತೆಗೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆಯ ಬದಿಗೆ ಹಾಕಲಾಗಿದ್ದ ಜಲ್ಲಿ ಮತ್ತು ಮಣ್ಣು ಕೊಚ್ಚಿಹೋಗಿ ರಸ್ತೆಗೆ ತೀವ್ರ ಹಾನಿಯಾಗಿದ್ದು, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗಳನ್ನು ಚಲಾಯಿಸುವಾಗ ಮೈಯೆಲ್ಲಾ ಕಣ್ಣಾಗಿಸಿಕೊಂಡು ಓಡಾಡಬೇಕಾಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಇದೇ ರಸ್ತೆಯ ಮುಖಾಂತರವೇ ಚಲಿಸಬೇಕಿದ್ದು, ಇದರಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ವಾಹನಗಳೂ ಸೇರಿವೆ. ಆದರೂ ಸಹ ಸಮಸ್ಯೆಯ ಬಗ್ಗೆ ತಿಳಿದಿರುವ ಸಂಬಂಧಪಟ್ಟ ಅಧಿಕಾರಿಗಳು ನಿವಾರಿಸುವ ಗೋಜಿಗೆ ಹೋಗುತ್ತಿಲ್ಲ. ಇನ್ನು ವಿಧಿಯಿಲ್ಲದೇ ಸಾರ್ವಜನಿಕರು ಅನಿವಾರ್ಯವಾಗಿ ಡಾಂಬರು ಕಿತ್ತುಹೋಗಿರುವ ಹಾಗೂ ಗುಂಡಿ ಬಿದ್ದಿರುವ ರಸ್ತೆಯನ್ನೆ ಪ್ರಯಾಣಕ್ಕಾಗಿ ಅವಲಂಬಿಸಬೇಕಾಗಿದೆ. ಬೇಡದ ಕಾಮಗಾರಿಗಳಿಗಾಗಿ ಸಾರ್ವಜನಿಕರ ಹಣ ಪೋಲು ಮಾಡುವ ಸರ್ಕಾರ ಜನತೆಗೆ ಉತ್ತಮ ರಸ್ತೆ ಸೌಲಭ್ಯ ನೀಡುವ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಸರ್ಕಾರಕ್ಕೆ ಹಿಡಿಶಾಪ ಹಾಕುವ ಪರಿಸ್ಥಿತಿ ಬಂದೊದಗಿದೆ.
ಕಾಲ ಕಾಲಕ್ಕೆ ರಸ್ತೆ ಅಭಿವೃದ್ಧಿ ಮತ್ತು ನಿರ್ವಹಣೆ ಮಾಡಬೇಕಾದ ಇಲಾಖೆ  ತನಗೇನು ಸಂಬಂಧವಿಲ್ಲವೆಂಬಂತೆ ಕಣ್ಮುಚಿ ಕುಳಿತಿದೆಯೆಂದು ಪ್ರಯಾಣಿಕರು ಬೇಸರದಿಂದ ಶಪಿಸುತ್ತಿದ್ದಾರೆ. ಹೀಗಾಗಿ ಪರಿಸ್ಥಿತಿಯ ತೀವ್ರತೆಯನ್ನು ಮನಗೊಂಡು ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಸುಧಾರಣೆಗೆ ಮುಂದಾಗದಿದ್ದಲ್ಲಿ ಅಪಘಾತಗಳು ಹೆಚ್ಚಾಗಿ ಅಮೂಲ್ಯವಾದ ಜೀವ ಹಾನಿ ಉಂಟಾಗುವುದರಲ್ಲಿ ಸಂಶಯವೇ ಇಲ್ಲವೆಂದು ಜನತೆ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement