ಪೊಲೀಸ್ ವಸತಿ ಗೃಹಗಳ ಕಾಯಕಲ್ಪ ಎಂದು?
ಟೇಕಲ್ ಲಕ್ಷ್ಮೀಶ
ಟೇಕಲ್: ಟೇಕಲ್ ಪೊಲೀಸ್ ವಸತಿ ಗೃಹಗಳು ಕೆ.ಜಿ. ಹಳ್ಳಿ ಹಳೇ ಗ್ರಾಪಂ ಕಚೇರಿ ಹಿಂಭಾಗದಲ್ಲಿದ್ದು ಸುಮಾರು 38 ವರ್ಷಗಳ ಹಿಂದೆ ಇವು ಸ್ಥಳೀಯ ಪೊಲೀಸರ ವಸತಿ ಗೃಹಗಳಾಗಿತ್ತು. ಪ್ರಸ್ಥುತ ಶಿಥಿಲವಾಗಿದ್ದು ಕಟ್ಟಡಗಳಲ್ಲಿ ಗಿಡಗಳು ಬೆಳೆದು ಬಹುತೇಕ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ.
ಅಭಿವೃದ್ಧಿಯ ಬಗ್ಗೆ ನಿರ್ಲಕ್ಷ್ಯ: ಹಿಂದಿನಿಂದಲೂ ಹಲವಾರು ಜನಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡಿ ಇದರ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. 2010-11 ನೇ ಸಾಲಿನಲ್ಲಿ ಇಲ್ಲಿ ಟೇಕಲ್ ಹೊರಠಾಣೆ ಮಂಜೂರಾಗಿದ್ದು ಕಟ್ಟಡದ ವ್ಯವಸ್ಥೆ ಮುಗಿದು ಹೊರಠಾಣೆ ಕೆಲಸ ನಿರ್ವಹಿಸುತ್ತಿದೆ. ಆದರೆ ಅದರ ಪಕ್ಕದಲ್ಲಿಯೆ ಅವರಿಗಾಗಿ ನಿರ್ಮಿಸಿರುವ ವಸತಿ ಗೃಹಗಳು ಶಿಥಿಲವಾಗುತ್ತಿದೆ. ಕೋಲಾರ ಜಿಲ್ಲೆಗೆ ಬಂದಂತಹ ಬಹುತೇಕ ಜಿಲ್ಲಾ ವರಿಷ್ಠಾಧಿಕಾರಿಗಳು ಬಂದು ಸ್ಥಳ ವೀಕ್ಷಿಸಿ ಹೋದರು ಯಾವುದೇ ಅಭಿವೃದ್ಧಿ ಮಾಡಲು ಮುಂದಾಗಲಿಲ್ಲ.
ಹೊರಠಾಣೆ ಮೇಲ್ದರ್ಜೆಗೇರಿಸಿ: ಟೇಕಲ್ ಹೋಬಳಿಯಲ್ಲಿ ಸುಮಾರು 97 ಕ್ಕೂ ಹೆಚ್ಚು ಗ್ರಾಮಗಳಿದ್ದು, ಯಾವುದಾದರೊಂದು ಗಲಾಟೆ ನಡೆಯುತ್ತಿರುತ್ತದೆ. ಈ ಬಗ್ಗೆ ಫಿರ್ಯಾದು ಸಲ್ಲಿಸಬೇಕಾದರೆ ಟೇಕಲ್ನಿಂದ ಸುಮಾರು 18 ಕಿ.ಮೀ ದೂರದ ಮಾಸ್ತಿಗೆ ತೆರಳಿ ಕೇಸು ದಾಖಲಿಸಬೇಕು. ಹಿಂದೆ ಕರ್ನಾಟಕದ ಗೃಹ ಮಂತ್ರಿಗಳಾಗಿದ್ದ ಇದೀಗ ಕೇಂದ್ರ ರೈಲ್ವೆ ಸಚಿವರಾಗಿರುವ ಮಲ್ಲಿಕಾರ್ಜುನ ಖರ್ಗೆ, ಅಶೋಕ್ ಕುಮಾರ್ರವರಿಗೆ ಟೇಕಲ್ ಹೊರ ಠಾಣೆಯನ್ನು ಮೇಲ್ದರ್ಜೆಗೇರಿಸುವ ಭರವಸೆ ನೀಡಿದ್ದರು. ಆದರೆ ಅದು ನಿಜವಾಗಲಿಲ್ಲ ನಂತರ ಮಂತ್ರಿಗಳಾದ ಎಸ್.ಎನ್. ಕೃಷ್ಣಯ್ಯಶೆಟ್ಟರು ಅವರದೇ ಸರ್ಕಾರ ಇದ್ದಾಗ ಅವರೇ ಸಚಿವರಾಗಿದ್ದಾಗಲೂ ಅದೇಕೋ ಮನಸ್ಸು ಮಾಡಲಿಲ್ಲ.
ಪೊಲೀಸ್ ಪೇದೆಗಳಿಗೆ ಸಹಾಯಕ: ಈ ವಸತಿ ಗೃಹಗಳು ಪುನರ್ ನಿರ್ಮಾಣವಾದರೆ ಸುಮಾರು 5 ರಿಂದ 6 ಪೊಲೀಸ್ ಪೇದೆಗಳ ಕುಟುಂಬ ಇರಲು ಸಹಾಯವಾಗುತ್ತದೆ. ಇಲ್ಲಿ ವಸತಿ ಗೃಹ ನಿರ್ಮಾಣಕ್ಕೆ, ಠಾಣೆಯನ್ನು ಮೇಲ್ದರ್ಜೆಗೇರಿಸುವುದಕ್ಕೆ ಸಾರ್ವಜನಿಕರಿಂದ ಹಲವಾರು ಭಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಜಿಪಂ ಸದಸ್ಯೆ ಭೇಟಿ: ಹಿಂದೊಮ್ಮೆ ಈ ಬಗ್ಗೆ ಸ್ಥಳೀಯ ಪ್ರಭಾವಿ ಮುಖಂಡ, ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ ಹಾಗೂ ಟೇಕಲ್ ಜಿಪಂ ಕ್ಷೇತ್ರದ ಸದಸ್ಯೆ ರತ್ನಮ್ಮ ನಂಜೇಗೌಡ ಸ್ಥಳಕ್ಕೆ ಭೇಟಿ ನೀಡಿ ಶಾಸಕ ಮಂಜುನಾಥಗೌಡರಿಂದ ಇದನ್ನು ಗೃಹ ಮಂತ್ರಿಗಳ ಬಳಿ ಒತ್ತಡ ತಂದು ಶಿಥಿಲ ವಸತಿ ಗೃಹಗಳ ಪುನರ್ ನಿರ್ಮಿಸುವುದಾಗಿ ಹಾಗೂ ಟೇಕಲ್ ಪೊಲೀಸ್ ಹೊರಠಾಣೆಯನ್ನು ಮೇಲ್ದರ್ಜೆಗೇರಿಸುವ ಭರವಸೆ ನೀಡಿದ್ದರು. ಆದರೆ ಈವರೆಗೂ ಆ ಕೆಲಸ ನಡೆದಿಲ್ಲ. ಒಟ್ಟಾರೆ ಸ್ಥಳೀಯ ಮುಖಂಡರು ಈ ಬಗ್ಗೆ ಮನಸ್ಸು ಮಾಡಿದರೆ ಟೇಕಲ್ ಇತಿಹಾಸದಲ್ಲಿ ಇದು ಪ್ರಥಮ ನೂತನ ಪೊಲೀಸ್ ಠಾಣೆ ನಿರ್ಮಾಣವಾಗುತ್ತದೆ ಎಂಬುದು ಜನತೆಯ ಅಭಿಲಾಷೆಯಾಗಿದೆ. ಶಾಸಕ ಕೆ.ಎಸ್. ಮಂಜುನಾಥಗೌಡರು ಇತ್ತ ಗಮನಿಸಿ ಸಮಸ್ಯೆ ಪರಿಹರಿಸಿಕೊಡಬೇಕೆಂಬುದು ಜನತೆಯ ಅಳಲಾಗಿದೆ.