ರೈಲು ಹತ್ತುವಾಗ ಕಾಲು ಜಾರಿ ವ್ಯಕ್ತಿ ಸಾವು
ಟೇಕಲ್: ರೈಲು ಹತ್ತುವಾಗ ಆಕಸ್ಮಿಕ ಕಾಲು ಜಾರಿ ಮೃತಪಟ್ಟಿರುವ ಘಟನೆ ಇಲ್ಲಿನ ರೈಲು ನಿಲ್ದಾಣದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.ಮೃತಪಟ್ಟವರನ್ನು ಆರುಮುಗಂ (49) ಗುಡ್ನಹಳ್ಳಿ ನಿವಾಸಿ. ಕೋಲಾರ-ಬೆಂಗಳೂರು ಪುಷ್ಪುಲ್ ರೈಲು ಟೇಕಲ್ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 3-50ಕ್ಕೆ ಬಂದ ಸಮಯದಲ್ಲಿ ಈ ಘಟನೆ ನಡೆದಿದೆ. ಮೃತ ಆರುಮುಗಂ ಸ್ಥಳೀಯ ಮಿಲಿಟರಿ ಹೊಟೇಲ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರೆನ್ನಲಾಗಿದೆ.
ಗುಂಪು ಘರ್ಷಣೆ; 30ಕ್ಕೂ ಹೆಚ್ಚು ಜನರಿಗೆ ಗಾಯ
ಟೇಕಲ್: ನಲ್ಲಿಯಲ್ಲಿ ನೀರು ಹಿಡಿಯುವ ವಿಚಾರದಲ್ಲಿ ಪ್ರಾರಂಭವಾದ ಜಗಳ ಗುಂಪು ಘರ್ಷಣೆಗೆ ತಿರುಗಿ ಎರಡು ಕಡೆಯವರು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡ್ಲುಪಾಳ್ಯದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಗುಂಡ್ಲುಪಾಳ್ಯದಲ್ಲಿ ಸಾಕಮ್ಮ, ಮಂಗಮ್ಮ ಎಂಬವರು ನಲ್ಲಿಯಲ್ಲಿ ಕುಡಿಯುವ ನೀರನ್ನು ಹಿಡಿಯುತ್ತಿದ್ದ ವೇಳೆ ಬಿಂದಿಗೆಗಳು ಅದಲುಬದಲು ಆದ ವಿಚಾರಕ್ಕೆ ಗಲಾಟೆ ನಡೆದು ನಂತರ ವಿಕೋಪಕ್ಕೆ ತಿರುಗಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ ಹೊಡೆದಾಡಿಕೊಂಡಿದ್ದು ಎರಡೂ ಕಡೆಯವರು ಮಾಲೂರು ಸರ್ಕಾರಿ ಆಸ್ಪತ್ರೆ, ಕೋಲಾರದ ಎಸ್ಎನ್ಆರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಒಬ್ಬನಿಗೆ ತಲೆಗೆ ತೀವ್ರವಾದ ಗಾಯವಾಗಿದೆ. ಸ್ಥಳಕ್ಕೆ ಅಡಿಷನಲ್ ಎಸ್ಪಿ ಜಮಾದ್, ಡಿವೈಎಸ್ಪಿ ಅಶೋಕ್ ಕುಮಾರ್, ಮಾಲೂರು ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಭೇಟಿ ನೀಡಿದ್ದು ಮಾಸ್ತಿ ಪಿಎಸ್ಐ ಸಿದ್ದಪ್ಪ ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದು, ಎರಡೂ ಕಡೆ ಕೇಸು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.