'ವಿದ್ಯಾಸಿರಿ ಬಡ ವಿದ್ಯಾರ್ಥಿಗಳಿಗೆ ವಿಸ್ತರಿಸಿ'
ಕ.ಪ್ರ.ವಾರ್ತೆ ಕೋಲಾರ ನ.6
ಹಾಸ್ಟೆಲ್ ಸೌಲಭ್ಯದಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿರುವ ವಿದ್ಯಾಸಿರಿ ಯೋಜನೆ ರಾಜ್ಯದ ಎಲ್ಲಾ ವರ್ಗಗಳ ಬಡ ವಿದ್ಯಾರ್ಥಿಗಳಿಗೆ ವಿಸ್ತರಣೆ ಮಾಡಬೇಕೆಂದು ನಗರಸಭೆ ಸದಸ್ಯ ಎಂ.ಬಿ. ಮುಬಾಕರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ದಾನಿಗಳಾದ ಉಡುಪಿಯ ಮಂಜುನಾಥ್ ಕುಲಾಲ್, ಪ್ರಜ್ವಲ್ ಕುಲಾಲ್ ಹಾಗೂ ಕುಂದಾಪುರದ ರಾಘವೇಂದ್ರ ಮಡಿವಾಳ್ ಹಾಗೂ ಕೋಲಾರದ ಸುರೇಶ್ ಗೌಡ ಪ್ರಾಯೋಜಿತ ಸಮ ವಸ್ತ್ರಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಡ ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿರುವ ವಿದ್ಯಾಸಿರಿ ಯೋಜನೆ ಮೆಚ್ಚುವಂತಹದು. ಆದರೆ, ಈ ಯೋಜನೆ ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿಸ್ತರಣೆಯಾದಲ್ಲಿ ಮಾತ್ರ ಅಸಮಾನತೆ ನಿವಾರಣೆ ಆಗುತ್ತದೆ, ಸಾಮಾಜಿಕ ನ್ಯಾಯದ ಒತ್ತಾಸೆ ಈಡೇರುತ್ತದೆ ಎಂದರು.
ತಾವು ಕಾಲೇಜು ವ್ಯಾಪ್ತಿಗೆ ಒಳಪಡುವ ನಗರಸಭೆ ಸದಸ್ಯನಾಗಿದ್ದು, ಕಾಲೇಜಿನ ಅಭಿವೃದ್ಧಿಗೆ ಕೈಲಾದಷ್ಟು ಸಹಾಯ ಮಾಡುತ್ತೇನೆ. ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುವ ಎಲ್ಲಾ ವಿಭಾಗಗಳ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ತಲಾ 5 ಸಾವಿರ ರು. ಬಹುಮಾನ ನೀಡುವುದಾಗಿ ತಿಳಿಸಿದರು.
ಮಹಿಳಾ ಸಮಾಜದ ವಿವಿಧ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿಯಾಗಿರುವ ಉಷಾ ಗಂಗಾಧರ್ ಮಾತನಾಡಿ, ಕಾಲೇಜು ವಿದ್ಯಾರ್ಥಿನಿಯರಿಗೆ ಸಮ ವಸ್ತ್ರ ಮುಖ್ಯ. ಸಮದೃಷ್ಟಿ ಮತ್ತು ಐಕ್ಯತೆಗಾಗಿ ಸಮವಸ್ತ್ರ ಒಂದು ನೀತಿ ಸಂಹಿತೆಯಾದಲ್ಲಿ ವಿದ್ಯಾರ್ಥಿನಿಯರು ಸುರಕ್ಷಿತರಾಗಿರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜು ಸಮವಸ್ತ್ರ ಕಾಲೇಜಿಗೆ ಮಾತ್ರ ಸಿಮೀತವಾದರೆ ಒಳ್ಳೆಯದು ಎಂದು ಮಾರ್ಮಿಕವಾಗಿ ನುಡಿದ ಅವರು, ವಿದ್ಯಾರ್ಥಿನಿಯರಲ್ಲಿ ಕೀಳಿರಿಮೆ ಹೋಗಲು ಸಮವಸ್ತ್ರ ಅಗತ್ಯ. ಇತ್ತೀಚಿನ ಟ್ರೆಂಡ್ ಗಮನಿಸಿದರೆ ಸಮವಸ್ತ್ರ ಅನಿವಾರ್ಯ ಎಂಬ ವಾದ ಕೇಳಿ ಬರುತ್ತಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ ಏಕೆ ಎಂದು ಪ್ರಶ್ನಿಸುತ್ತಿದವರು ಒಪ್ಪಿಕೊಳ್ಳುವಂತಾಗಿದೆ ಎಂದರು. ಮುಂದಿನ ವರ್ಷ ತಾವು ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸಮವಸ್ತ್ರಕ್ಕಾಗಿ ಕೈಲಾದಷ್ಟು ಸಹಾಯ ನೀಡುವುದಾಗಿ ಪ್ರಕಟಿಸಿದರು.
ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ. ರಾಮರಾಜು ಮಾತನಾಡಿ, ಕೋಲಾರದಲ್ಲಿ ಮಹಿಳಾ ಕಾಲೇಜು ಸ್ಥಾಪನೆಯ ನಂತರ ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿ ಹೆಚ್ಚಾಗುತ್ತಿದೆ. ಸರ್ಕಾರದ ಜೊತೆಗೆ ಸಮಾಜ ಸೇವಕರು ಮತ್ತು ದಾನಿಗಳು ಬಡ ವಿದ್ಯಾರ್ಥಿಗಳ ಅಭಿವೃದ್ಧಿಗೆ ಸಹಾಯ ಮಾಡುತ್ತಿರುವುದರಿಂದ ಇದರ ಪ್ರಯೋಜನ ಪಡೆದು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಆಯೋಜಕ ಹಾಗೂ ವಿದ್ಯಾರ್ಥಿ ಮುಖಂಡ ಸುರೇಶ್ ಗೌಡ ಪ್ರಸ್ತಾವಿಕವಾಗಿ ಮಾತನಾಡಿ, ಸಮವಸ್ತ್ರಗಳ ವಿತರಣೆಯ ಉದ್ದೇಶ ತಿಳಿಸಿದರು. ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಡುಪಲ್ಲಿ ಕೃಷ್ಣಮೂರ್ತಿ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.