ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾದಿಭಾಗ್ಯ ವಿರೋಧಿಸಿ ಕರವೇ ಪ್ರತಿಭಟನೆ

Rashmi Kasaragodu
Updated On : 7 Nov 2013, 12:53 pm

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಾದಿಭಾಗ್ಯ ಯೋಜನೆಯನ್ನು ಮದುವೆ ಭಾಗ್ಯ ಎಂದು ಬದಲಾಯಿಸಿ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವಂತೆ ಯೋಜನೆ ವಿಸ್ತರಿಸಬೇಕೆಂದು ಕರವೇ ಜಿಲ್ಲಾಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್ ಒತ್ತಾಯಿಸಿದರು.
ನಗರದಲ್ಲಿ ರಾಜ್ಯ ಸರ್ಕಾರದ ಶಾದಿಭಾಗ್ಯ ಯೋಜನೆಯ ವಿರುದ್ಧ ಕರವೇ ಕೈಗೊಂಡ ಪ್ರತಿಭಟನೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಮತಗಳಿಕೆಗಾಗಿ ಶಾದಿಭಾಗ್ಯ ಯೋಜನೆ ಮೂಲಕ ಕೋಮು ರಾಜಕಾರಣ ಮಾಡುತ್ತಿದೆ. ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವುದಕ್ಕೆ ಯಾರ ಅಭ್ಯಂತರವೂ ಇಲ್ಲ. ಆದರೆ, ತಮ್ಮ ಸ್ವಾರ್ಥ ಸಾಧನೆಗಾಗಿ ಜನರಲ್ಲಿ ತಾರತಮ್ಯ ಮನೋಭಾವನೆಯನ್ನುಂಟು ಮಾಡುವ ಯೋಜನೆಗಳನ್ನು ಜಾರಿಗೆ ತಂದರೆ ಜನರು ಸಹಿಸುವುದಿಲ್ಲ. ಪ್ರಸ್ತುತ ಜಾರಿಗೆ ತಂದಿರುವ ಶಾದಿ ಭಾಗ್ಯ ಯೋಜನೆಯಿಂದ ಸಮಾಜದಲ್ಲಿ ಒಡಕಿನ ವಾತಾವರಣ ನಿರ್ಮಾಣವಾಗುತ್ತದೆ ಎಂದು ಆರೋಪಿಸಿದರು.
ಇತ್ತೀಚೆಗೆ ರಾಜಕಾರಣಿಗಳು ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತರುವ ಸಂದರ್ಭದಲ್ಲಿ ಜಾತಿ ರಾಜಕಾರಣ ಮಾಡುತ್ತಿರುವುದು ದುರಾದೃಷ್ಟಕರ. ಇದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಈಗ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇದೇ ಕೆಲಸವನ್ನು ಮಾಡುತ್ತಿದ್ದಾರೆ. ಒಂದು ಕೋಮನ್ನು ಒಲಿಸಿಕೊಳ್ಳಲು ಜನರ ನಡುವಿನ ಬಾಂಧವ್ಯ ಹಾಳು ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ಜನರನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಜಾರಿಗೆ ತರಬೇಕೇ ಹೊರತು ತಾರತಮ್ಯ ಯೋಜನೆಗಳ ಮೂಲಕ ಕೇವಲ ಒಂದು ವರ್ಗದ ಪರ ಮುಖ್ಯಮಂತ್ರಿ ಎನಿಸಿಕೊಳ್ಳಬಾರದು ಎಂದು ತಿಳಿಸಿದರು.
ರಾಜ್ಯದಲ್ಲಿ ಎಲ್ಲಾ ವರ್ಗಗಳಲ್ಲಿಯೂ ಬಡ ಹೆಣ್ಣು ಮಕ್ಕಳಿದ್ದಾರೆ. ಆರ್ಥಿಕ ಸಮಸ್ಯೆಯಿಂದ ನಲುಗಿ ಹೋಗುತ್ತಿದ್ದಾರೆ. ಇದನ್ನು ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು. ಪ್ರಸ್ತುತ ಶಾದಿ ಭಾಗ್ಯ ಯೋಜನೆಯ ಮೂಲಕ ಮುಸ್ಲಿಂ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ಕೊಟ್ಟು ಮದುವೆ ಮಾಡಿಸುವುದನ್ನು ಮುಂದುವರೆಸಲಿ, ಆದರೆ, ಈ ಯೋಜನೆಯನ್ನು ವಿಸ್ತರಿಸಿ ಎಲ್ಲಾ ವರ್ಗದ ಜನರು ಅನುಕೂಲ ಪಡೆದುಕೊಳ್ಳುವಂತೆ ಮಾಡಬೇಕೆಂದು ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕರವೇ ಕಾರ್ಯಕರ್ತರು ಶಿಡ್ಲಘಟ್ಟ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಧಿಕ್ಕಾರ ಕೂಗಿದರು. ನಂತರ ಉಪ ವಿಭಾಗಾಧಿಕಾರಿ ಶಾಂತಲಾ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಿದರು.  ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಉಪಾಧ್ಯಕ್ಷ ಉಲುವಾಡಿ ಮುನಿನಾರಾಯಣ, ಕಾರ್ಯದರ್ಶಿ ಮಲ್ಲೇಶ್, ಮಹಬೂಬ್ ಬಾಷಾ, ಜನಾರ್ದನ್, ಆನಂದ್ ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement