ಕರ್ನಾಟಕ ಪ್ರಾಂತ ರೈತ ಸಂಘದ ಪ್ರತಿಭಟನೆ
ಚಿಕ್ಕಬಳ್ಳಾಪುರ: ಬೆಳೆದ ಬೆಳೆಗಳ ಬೆಲೆ ಕುಸಿತದಿಂದ ರೈತರು ನಷ್ಟಕ್ಕೆ ಗುರಿಯಾಗುವುದನ್ನು ತಪ್ಪಿಸಲು ಸ್ವಾಮಿನಾಥನ್ ಸಲಹೆಯಂತೆ ಸರ್ಕಾರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಬೇಕೆನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಗುರುವಾರ ನಿರಂತರ 48 ಗಂಟೆಗಳ ಅಹೋ ರಾತ್ರಿ ಧರಣಿ ಪ್ರಾರಂಭಿಸಿದ್ದಾರೆ.
ನಗರದ ಶ್ರೀ ಶನಿಮಹಾತ್ಮ ದೇವಾಲಯದಿಂದ ತಮ್ಮ ಪ್ರತಿಭಟನಾ ಮೆರವಣಿಗೆಯನ್ನು ಪ್ರಾರಂಭಿಸಿದ ರೈತ ಮುಖಂಡರು ಶಿಡ್ಲಘಟ್ಟ ವೃತ್ತದಲ್ಲಿ ಕೆಲ ಸಮಯ ರಸ್ತೆ ಸಂಚಾರ ತಡೆದು ನಂತರ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಕಾಲ್ನಡಿಗೆಯಲ್ಲಿ ಹೊರಟರು. ರೈತ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಗೋಪಿನಾಥ್, ರೈತರನ್ನು ಬೀದಿಪಾಲು ಮಾಡುವ ನೀತಿಗಳನ್ನು ಸರ್ಕಾರಗಳು ಜಾರಿಗೆ ತರುವ ಮೂಲಕ ಬಂಡವಾಳಶಾಹಿ ಮತ್ತು ಖಾಸಗೀ ಕಂಪನಿಗಳಿಗೆ ಅನುಕೂಲ ಮಾಡಿಕೊಡುತ್ತಿರುವುದು ದುರಾದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಜಿಪಂ ಸದಸ್ಯೆ ಸಾವಿತ್ರಮ್ಮ, ಚನ್ನರಾಯಪ್ಪ, ಬಿ.ಎನ್. ಮುನಿಕೃಷ್ಣಪ್ಪ, ಶೋಭಾರಾಣಿ, ಮಧುಲತಾ ಇದ್ದರು.