ಗೋಮಾಳ ರಕ್ಷಣೆಗೆ 14 ವರ್ಷ ಹೋರಾಡಿದ ರೈತ
ಟೇಕಲ್ ಲಕ್ಷ್ಮೀಶ್
ಟೇಕಲ್: ಸರ್ಕಾರಿ ಭೂಮಿ (ಗೋಮಾಳ) ರಕ್ಷಣೆ ಮಾಡಲು ರೈತನೊಬ್ಬ ಪಟ್ಟು ಬಿಡದೆ ಸತತ 14 ವರ್ಷಗಳ ಕಾಲ ಪಟ್ಟ ಪರಿಶ್ರಮ ಅಧಿಕಾರಿಗಳ ನಿರ್ಲಕ್ಷ್ಯದ ನಡುವೆಯೂ ಲೋಕಾಯುಕ್ತ ಪೊಲೀಸರ ಸೂಚನೆಯಿಂದ ಎಚ್ಚೆತ್ತ ತಾಲೂಕು ಆಡಳಿತ ನ.8 ರಂದು ಜಮೀನಿಗೆ ಸರ್ಕಾರಿ ಪ್ರದೇಶ ಎಂಬ ನಾಮಫಲಕ ಹಾಕಲಾಗುತ್ತಿದೆ.
ಏನಿದು ಕಥೆ?: ಟೇಕಲ್ ಹೋಬಳಿಯ ಬನಹಳ್ಳಿ ಗ್ರಾಪಂ ವ್ಯಾಪ್ತಿಯ ಯಲುವಹಳ್ಳಿ ಗ್ರಾಮದ ಹೂತೋಟಪ್ಪನ ಮಗನೇ ಪರಿಶ್ರಮದ ರೈತ ನಾರಾಯಣಸ್ವಾಮಿ. ತಮ್ಮ ಗ್ರಾಮದ ಸರ್ವೇ ನಂ.70ರಲ್ಲಿರುವ ಗೋಮಾಳ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಉಳುಮೆ ಮಾಡುತ್ತಿದ್ದ ಮುನಿಯಪ್ಪ ಮತ್ತು ಮುನಿಚೌಡಪ್ಪರವರು ಜಮೀನನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನ ನಡೆಸಿದರು. ಕೊನೆಗೆ ಮಾಲೂರಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಧಾವೆ ಹೂಡಿದರು. ಈ ನಡುವೆ ರೈತ ನಾರಾಯಣಸ್ವಾಮಿ ಮೇಲೆ ಇದೇ ವಿಷಯವಾಗಿ ಹಲವಾರು ಬಾರಿ ಹಲ್ಲೆ ನಡೆಸಲಾಯಿತು. 2012ರ ಮಾರ್ಚ್ನಲ್ಲಿ ಮಾಲೂರು ನ್ಯಾಯಾಲಯ ಈ ಸ್ಥಳ ಸರ್ಕಾರಿ ಭೂಮಿ ಎಂದು ಘೋಷಿಸಿ ತೀರ್ಪು ನೀಡಿತು.
ಲೋಕಾಯುಕ್ತರ ಮೊರೆ: ಇದಕ್ಕೆ ತಕ್ಕ ನಾಮಫಲಕ ಹಾಕಲು ರೈತ ನಾರಾಯಣಸ್ವಾಮಿ ಆಗಿನ ತಹಸೀಲ್ದಾರ್ಗೆ ಮನವಿ ನೀಡಿದ್ದರು. ಈ ಮಧ್ಯೆ ಹಲವಾರು ತಹಸೀಲ್ದಾರರು ಬದಲಾದ ಹಿನ್ನಲೆಯಲ್ಲಿ ಅದು ಕಸದ ಬುಟ್ಟಿ ಸೇರಿತು, ಪಟ್ಟು ಬೀಡದ ನಾರಾಯಣಸ್ವಾಮಿ ಈ ಬಗ್ಗೆ ಮಾಲೂರಿನಲ್ಲಿ ಲೋಕಾಯುಕ್ತ ಅಧೀಕ್ಷಕರು ನಡೆಸಿದ ಸಾರ್ವಜನಿಕ ಕುಂದು ಕೊರತೆಗಳ ಸಭೆಯಲ್ಲಿ ಮನವಿ ಸಲ್ಲಿಸಿದರು. ಪ್ರತಿ ಸಭೆಯಲ್ಲೂ ನಾಮಫಲಕ ಹಾಕಲು ಸೂಚನೆ ನೀಡಿದರಾದರೂ ಅದು ಕೈಗೂಡುತ್ತಿರಲಿಲ್ಲ. ನಾಲ್ಕು ಸಭೆ ನಡೆದಾಗಲೂ ಮನವಿ ನೀಡಲಾಯಿತು. ಕೊನೆಗೆ ಕಳೆದ ಮೇ ನಲ್ಲಿ 23 ರಂದು ಮಾಲೂರಿನಲ್ಲಿ ಲೋಕಾಯುಕ್ತ ಅಧೀಕ್ಷಕರು ನಡೆಸಿದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಅವರು ಮನವಿ ಸಲ್ಲಿಸಿದರು. ಆ ದೂರಿನ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತ ಪೊಲೀಸರು ಸೂಚನೆ ನೀಡಿದ ನಂತರ ಎಚ್ಚೆತ್ತ ಈಗಿನ ತಹಸೀಲ್ದಾರ್ ಡಾ. ಸುಧಾರವರು ಗೋಮಾಳದ ರಕ್ಷಣೆಗೆ ಮುಂದಾಗಿದ್ದಾರೆ.
ಟೇಕಲ್ ಹೋಬಳಿಯ ಕಂದಾಯ ನಿರೀಕ್ಷಕರು ಸ್ಥಳ ಪರಿಶೀಲನೆ ಮಾಡಿ ಜಮೀನು ಬೀಡು ಇರುವುದರ ಕುರಿತಾದ ವರದಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಗೋಮಾಳ ಪ್ರದೇಶದಲ್ಲಿ ಸರ್ಕಾರಿ ಪ್ರದೇಶ ಎಂಬ ನಾಮಫಲಕ ಅಳವಡಿಸಲು ಇದೇ ತಿಂಗಳ 8 ರಂದು ನಿಗಧಿಪಡಿಸಲಾಗಿದೆ.
ಅನಾಥವಾಗಿರುವ ಜಾಗ: 14 ವರ್ಷಗಳಿಂದ ಗೋಮಾಳ ಅನಾಥವಾಗಿದೆ ಅದನ್ನು ಯಾರು ಯಾವಾಗ ಬೇಕಾದರೂ ಒತ್ತುವರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಅಂದಾಜು 10 ಎಕರೆಗಿಂತ ಮೇಲ್ಪಟ್ಟಿರುವ ಈ ಸ್ಥಳವನ್ನು ನಾಮಫಲಕ ಹಾಕುವುದರ ಜೊತೆಗೆ ಸರ್ವೇ ನಡೆಸಿ ಸುತ್ತಲೂ ಬೇಲಿ ಹಾಕುವುದು ಅಗತ್ಯ ಎಂಬುದು ರೈತ ನಾರಾಯಣಸ್ವಾಮಿಯ ಮನವಿ. ಆತನೇ ಹೇಳುವಂತೆ ತನ್ನದಲ್ಲದ ಜಾಗವಾದ ಈ ಗೋಮಾಳದ ರಕ್ಷಣೆ ಸಲುವಾಗಿ ನನ್ನ ಮೇಲೆ ಹಲ್ಲೆ ಮಾಡಲಾಗಿದ್ದು ನನ್ನ ಮನೆಯ ಮೇಲೂ ಕಲ್ಲು ತೂರಲಾಯಿತು. ಇದರಿಂದ ಪೊಲೀಸರಿಂದ ರಕ್ಷಣೆ ಕೋರಿದ್ದಾನೆ. ಲೋಕಾಯುಕ್ತರ ಆದೇಶದ ಮೇರೆಗೆ ಇಂದು ಮಾಲೂರು ತಾಲೂಕು ಪೊಲೀಸ್ ಬಂದೋಬಸ್ತ್ನಲ್ಲಿ ತಹಸೀಲ್ದಾರ್ ಡಾ. ಸುಧಾರವರು ಅದಕ್ಕೆ ಸೂಕ್ತ ನಾಮಫಲಕ ಹಾಕಲಿದ್ದಾರೆ.