ಟ್ರ್ಯಾಕ್ಟರ್ ಅಡ್ಡಗಟ್ಟಿ ಸುಲಿಗೆ
ಕೋಲಾರ: ತಾಲೂಕಿನ ಬೀಚಗೊಂಡನಹಳ್ಳಿಯ ಸಮೀಪ ಮೂವರು ಅಪರಿಚಿತ ವ್ಯಕ್ತಿಗಳು ಟ್ರ್ಯಾಕ್ಟರ್ ಅಡ್ಡಗಟ್ಟಿ ಟ್ರ್ಯಾಕ್ಟರ್ ಚಾಲಕನಿಂದ 7 ಸಾವಿರ ನಗದು ಮತ್ತು ಮೊಬೈಲ್ ಫೋನ್ ಸುಲಿಗೆ ಮಾಡಿರುವ ಘಟನೆ ನಡೆದಿದೆ. ನ.5 ರಂದು ರಾತ್ರಿ 9.30ರ ಸಮಯದಲ್ಲಿ ಕೋಲಾರ ನಗರದ ಕಾರಂಜಿಕಟ್ಟೆ ವಾಸಿ ಮಹಮದ್ ಆಲಿ ಮತ್ತು ಷೇಕ್ ಅಬ್ದುಲ್ಲಾ ಅವರು ದೊಡ್ಡಬಳ್ಳಾಪುರದ ಬಳಿ ಇರುವ ಟಫೆ ಟ್ಯ್ರಾಕ್ಟರ್ ಕಂಪನಿಯಿಂದ ಹೊಸ ಟ್ಯಾಕ್ಟರಗಳನ್ನು ಕೋಲಾರದ ಆರ್.ಕೆ ಗೋಡನ್ಗೆ ತೆಗೆದುಕೊಂಡು ಬರುತ್ತಿದ್ದಾಗ ಈ ಘಟನೆ ನಡೆದಿದೆ. 3 ಜನ ಅಪರಿಚಿತ ವ್ಯಕ್ತಿಗಳು ಯಮಹಾ ಬೈಕಿನಲ್ಲಿ ಬಂದು ಮಹಮದ್ ಆಲಿ ಅವರು ಚಾಲನೆ ಮಾಡುತ್ತಿದ್ದ ವಾಹನಕ್ಕೆ ಅಡ್ಡಲಾಗಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ, ಆಲಿ ಅವರ ಮೇಲೆ ಹಲ್ಲೆ ಮಾಡಿ ಹಣ ಹಾಗೂ ಮೊಬೈಲ್ ಫೋನ್ಗಳನ್ನು ಸುಲಿಗೆ ಮಾಡಿದ್ದಾರೆ.
ಅಪಘಾತ; ವ್ಯಕ್ತಿ ಸಾವು
ಚಿಂತಾಮಣಿ: ಖಾಸಗಿ ಬಸ್ಸೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬುರುಡಗುಂಟೆ ಗ್ರಾಮದಲ್ಲಿ ನಡೆದಿದೆ. ರಾಮಾಂಜಿ(30) ಎಂಬಾತ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತನು ಚೇಳೂರು ಗ್ರಾಮದ ನಿವಾಸಿಯಾಗಿದ್ದಾನೆ.