ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಡಿಸಿಸಿ ಬ್ಯಾಂಕ್ ಚುನಾವಣೆ

Rashmi Kasaragodu
Updated On : 8 Nov 2013, 1:07 am

ಕ.ಪ್ರ.ವಾರ್ತೆ   ಕೋಲಾರ   ನ. 7
ರೈತರ ಜೀವನಾಡಿಯಾಗಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಗೆ ಇದೇ ನ.15 ರಂದು ನಡೆಯಲಿರುವ ಚುನಾವಣೆಗೆ ಎರಡೂ ಜಿಲ್ಲೆಯ 68 ಮಂದಿ ಘಟಾನುಘಟಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಡಿಸಿಸಿ ಬ್ಯಾಂಕಿಗೆ ವಿವಿಧ ವಿಭಾಗಗಳಿಂದ 15 ನಿರ್ದೇಶಕರ ಆಯ್ಕೆ ಆಗಬೇಕಾಗಿದೆ. ಗುರುವಾರ ನಾಮಪತ್ರ ಸಲ್ಲಿಸಲು ಕಡೆ ದಿನವಾಗಿತ್ತು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಜೊತೆ ಗುರುತಿಸಿಕೊಂಡಿರುವ ಹಾಗೂ ಪಕ್ಷೇತರ ಸಹಕಾರಿಗಳು ನಾಮಪತ್ರ ಸಲ್ಲಿಸಲು ತಮ್ಮ ಅಭಿಮಾನಿಗಳ ಜೊತೆ ಕೋಲಾರ ಉಪವಿಭಾಗಾಧಿಕಾರಿಗಳ ಕಚೇರಿಗೆ ಬಂದಿದ್ದರಿಂದ ಎಸಿ ಕಚೇರಿಯಲ್ಲಿ ಜನ ಜಂಗುಳಿ ಹೆಚ್ಚಾಗಿತ್ತು.
ಚುನಾವಣೆಗೆ ಸ್ಪರ್ಧಿಸಲು ಕೋಲಾರ ಜಿಲ್ಲೆಯ ಹಿರಿಯ ಸಹಕಾರಿ ಬ್ಯಾಲಹಳ್ಳಿ ಎಂ. ಗೋವಿಂದಗೌಡ, ಹಿರಿಯ ವಕೀಲ ಕೆ.ವಿ. ಶಂಕರಪ್ಪ, ಬಿಜೆಪಿ ಮುಖಂಡ ನರಸಿಂಹರಾಜು, ಪಿ.ಎಲ್.ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ನೀಲಕಂಠೇಗೌಡ, ಮಾಲೂರಿನ ಆರ್. ಪ್ರಭಾಕರ್, ಚಿಂತಾಮಣಿ ತಾಲೂಕಿನ ಹಿರಿಯ ಬಿಜೆಪಿ ಮುಖಂಡ ಸತ್ಯನಾರಾಯಣ ಮಹೇಶ್, ಹನುಮೇಗೌಡ ಸೇರಿದಂತೆ 68 ಮಂದಿ ಹುರಿಯಾಳುಗಳು ನಾಮಪತ್ರ ಸಲ್ಲಿಸಿದ್ದಾರೆ.
ದಿವಾಳಿಯ ಹಿನ್ನಲೆಯಲ್ಲಿ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯನ್ನು ಸರ್ಕಾರ ಸೂಪರ್ ಸೀಡ್ ಮಾಡಿತ್ತು. ಆಡಳಿತಾಧಿಕಾರಿಯ ನೇಮಕದಿಂದ ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಚೇತರಿಕೆಯಾಗಿದೆ. ಇದನ್ನು ಗಮನದಲ್ಲಿಟ್ಟು ಸಹಕಾರಿಗಳು ಧೈರ್ಯವಾಗಿ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನಿಂದ 11, 9 ಟಿಎಪಿಸಿಎಂಸಿಯಿಂದ ಒಬ್ಬರು, ಜಿಲ್ಲೆಯ 173 ಹಾಲು ಉತ್ಪಾದಕರ ಸೊಸೈಟಿಗಳಿಂದ ಒಬ್ಬರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ 233 ಹಾಲು ಸೊಸೈಟಿಗಳಿಂದ ಒಬ್ಬರು ಸೇರಿದಂತೆ ಒಟ್ಟು 15 ನಿರ್ದೇಶಕರು ಆಯ್ಕೆಯಾಗಬೇಕಾಗಿದ್ದು ನ.15 ರಂದು ಚುನಾವಣೆ ನಡೆಯಲಿದೆ.
ನ.8ರ ಶುಕ್ರವಾರ ನಾಮಪತ್ರಗಳ ಪರಿಶೀಲನೆ, ನ.9 ರಂದು ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕಡೆ ದಿನವಾಗಿದ್ದು ಅಗತ್ಯ ಬಿದ್ದಲ್ಲಿ ನ.15 ರಂದು ಮತದಾನ ನಡೆಯಲಿದೆ.
ಡಿಸಿಸಿ ಬ್ಯಾಂಕಿನ ಚುನಾವಣೆಯನ್ನು ಜೆಡಿಎಸ್ಮ್ತ್ತು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಕಾಂಗ್ರೆಸ್ ಕಾರ್ಯತಂತ್ರ ನಿಗೂಢವಾಗಿದೆ. ನ.10ರ ನಂತರ ಈ ಮೂರು ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ರಣತಂತ್ರ ರೂಪಿಸುವ ಸಾಧ್ಯತೆಗಳಿದ್ದು ಕೆಲ ಘಟಾನುಘಟಿ ಸಹಕಾರಿಗಳು ಈಗಾಗಲೇ ಮತದಾರರನ್ನು ಭೇಟಿಯಾಗಿ ಮತಯಾಚಿಲಾರಂಭಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement