ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೂತನ ರೈಲು ಸಂಚಾರಕ್ಕೆ ಕ್ಷಣಗಣನೆ

Rashmi Kasaragodu
Updated On : 8 Nov 2013, 1:03 am

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ-ಕೋಲಾರ ಮಾರ್ಗದ ನಡುವೆ ನೂತನ ರೈಲು ಸಂಚಾರಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ನ.8 ರಂದು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ರೈಲು ಬಂಡಿಗೆ ಹಸಿರು ಬಾವುಟ ತೋರಿಸುವ ಮೂಲಕ ಸಂಚಾರಕ್ಕೆ ಚಾಲನೆ ನೀಡಿ ಅವಿಭಜಿತ ಕೋಲಾರ ಜಿಲ್ಲೆಯ ಜನರ ಕನಸನ್ನು ನನಸು ಮಾಡಲಿದ್ದಾರೆ.
ನೂತನ ರೈಲು ಸಂಚಾರ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ನಂದಿ ರಂಗಮಂದಿರದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಸಾವಿರಾರು ಮಂದಿ ಕೂರಲು ಆಸನದ ವ್ಯವಸ್ಥೆ ಕೈಗೊಂಡಿದ್ದು ಹೆಚ್ಚಿನ ಪ್ರಚಾರ ಕೊಡದಿದ್ದರೂ ಅದ್ದೂರಿ ಕಾರ್ಯಕ್ರಮದ ಯಶಸ್ವಿಗೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.
ನ.8 ರಂದು ಬೆಳಿಗ್ಗೆ 10.30 ಕ್ಕೆ ನಗರದ ರೈಲ್ವೆ ನಿಲ್ದಾಣದಲ್ಲಿ ನಂ 76551, 76552 ಬೆಂಗಳೂರು-ಚಿಕ್ಕಬಳ್ಳಾಪುರ-ಕೋಲಾರ-ಬೆಂಗಳೂರು ಪ್ಯಾಸೆಂಜರ್ ರೈಲಿಗೆ ಕೇಂದ್ರ ರೈಲ್ವೆ ಸಚಿವರು ಹಸಿರು ಬಾವುಟ ತೋರಿಸಿದ ನಂತರ ಚಿಕ್ಕಬಳ್ಳಾಪುರ-ಕೋಲಾರ ಮಾರ್ಗದ ರೈಲು ಸಂಚಾರಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಇದೇ ಸಂದರ್ಭದಲ್ಲಿ ನಡೆಯಲಿರುವ ರೈಲು ಸಂಚಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಡಾ.ಎಂ. ವೀರಪ್ಪ ಮೊಯಿಲಿ, ಕೆ.ಎಚ್. ಮುನಿಯಪ್ಪ, ಕೆ. ರೆಹಮಾನ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಸಭೆ ಉಪಸಭಾಪತಿ ಎನ್.ಎಚ್. ಶಿವಶಂಕರರೆಡ್ಡಿ, ಶಾಸಕರಾದ ಡಾ.ಕೆ. ಸುಧಾಕರ್, ಎಂ. ರಾಜಣ್ಣ, ಎಸ್.ಎನ್. ಸುಬ್ಬಾರೆಡ್ಡಿ, ಜೆ.ಕೆ. ಕೃಷ್ಣಾರೆಡ್ಡಿ, ಡಾ.ಎ.ಎಚ್. ಶಿವಯೋಗಿಸ್ವಾವು, ವೈ.ಎ.ನಾರಾಯಣಸ್ವಾಮಿ, ನಸೀರ್ ಅಹಮದ್, ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ, ತಾಪಂ ಅಧ್ಯಕ್ಷ ಕೃಷ್ಣಮೂರ್ತಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ ಮಾರ್ಗವಾಗಿ ಕೋಲಾರಕ್ಕೆ ತೆರಳುವ ರೈಲಿಗೆ ಅದ್ಧೂರಿ ಸ್ವಾಗತ ಕೋರಲು ಅಲ್ಲಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ.
ಅಭಿವೃದ್ಧಿಯತ್ತ ನಿಲ್ದಾಣ: ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣದ ಸ್ವರೂಪವೇ ಇದೀಗ ಬದಲಾಗಿ ಹೊಸ ರೂಪದಲ್ಲಿ ಗಮನ ಸೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಚುಕುಬುಕು ರೈಲುಗಳ ಸಪ್ಪಳ ಇನ್ನೂ ಹೆಚ್ಚಾಗಲಿರುವ ಲಕ್ಷಣಗಳು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಹಿಂದೆ ಓಬೀರಾಯನ ಕಾಲದ ಹೆಂಚಿನ ಮನೆಯೇ ಕೇವಲ ರೈಲು ನಿಲ್ದಾಣವಾಗಿತ್ತು. ಸಮರ್ಪಕವಾದ ಸವಲತ್ತುಗಳನ್ನೂ ಹೊಂದಿರಲಿಲ್ಲ. ಸುಮಾರು 350 ಕೋಟಿ ರು. ವೆಚ್ಚದ ಚಿಕ್ಕಬಳ್ಳಾಪುರ-ಕೋಲಾರ ಮಾರ್ಗದ ರೈಲು ಸಂಚಾರ ಪ್ರಾರಂಭದಿಂದ ರೈಲು ನಿಲ್ದಾಣದ ಅಭಿವೃದ್ಧಿಯ ಗತಿ ವೇಗದಲ್ಲಿದೆ.
ಹಿಂದೆ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ರೈಲ್ವೆ ಸಚಿವರಾಗಿದ್ದಾಗ ಚಿಕ್ಕಬಳ್ಳಾಪುರ ರೈಲು ನಿಲ್ದಾಣ ಮಾದರಿ ನಿಲ್ದಾಣವಾಗಲಿದೆ. ಅಲ್ಲದೇ ಇಲ್ಲಿ ಜಂಕ್ಷನ್ ನಿರ್ಮಿಸಲಿದ್ದು ರೈಲು ಸಂಚಾರ ಹೆಚ್ಚಳವಾಗಲಿದೆ ಎಂಬ ಮಾತಿಗೆ ಪೂರಕವಾಗಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇದೀಗ ರೈಲ್ವೆ ಸ್ಟೇಷನ್ ಮಾಸ್ಟರ್ ಸುಗಮವಾಗಿ ಕಾರ್ಯ ನಿರ್ವಹಿಸಲು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಂದೆ ಹೊಸದಾಗಿ ನಿಲ್ದಾಣವನ್ನು ನಿರ್ಮಿಸಲಾಗಿದೆ. ಅಲ್ಲದೇ ಪ್ರಯಾಣಿಕರು ರೈಲನ್ನು ಸುಲಭವಾಗಿ ಹತ್ತಲು ಹಳೆಯ ರೈಲು ನಿಲ್ದಾಣದಿಂದ ಹಿಡಿದು ಹೊಸ ರೈಲ್ವೆ ನಿಲ್ದಾಣದವರೆಗೂ ಒಂದು ಕಡೆ (ಎಡಗಡೆ) ಫ್ಲಾಟ್ ಫಾರಂ ನಿರ್ಮಿಸಿದ್ದು ಮತ್ತೊಂದು ಬದಿಯಲ್ಲಿ ಫ್ಲಾಟ್ ಫಾರಂ ನಿರ್ಮಾಣ ಕಾಮಗಾರಿ ಚುರುಕಾಗಿ ನಡೆಯುತ್ತಿದೆ. ಹೆಚ್ಚಳವಾಗುವ ಪ್ರಯಾಣಿಕರ ಪ್ರಮಾಣಕ್ಕೆ ಅನುಗುಣವಾಗಿ ಟಿಕೆಟ್ ವಿತರಣೆ ಮಾಡಲು ಬುಕ್ಕಿಂಗ್ ಕೌಂಟರ್ ಸ್ಥಾಪಿಸಿದ್ದು ರೈಲಿಗಾಗಿ ಕಾಯುವಾಗ ಪ್ರಯಾಣಿಕರು ಕೂರಲು ಹೆಚ್ಚಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಮೂಲ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡುವ ನಿರೀಕ್ಷೆ ಹೊಂದಲಾಗಿದೆ.
ತಾತ್ಕಾಲಿಕ ರೈಲು ಸಂಚಾರ ಸಮಯ ನೂತನವಾಗಿ ಕೋಲಾರ-ಚಿಕ್ಕಬಳ್ಳಾಪುರದ ನಡುವೆ ಪ್ರಾರಂಭವಾಗಿರುವ ರೈಲು ಸಂಚರಿಸುವ ಸಮಯವನ್ನು ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ರೈಲಿಗೆ ಚಾಲನೆ ನೀಡಿದ ನಂತರ ಪ್ರಯಾಣಿಕರ ಅನುಕೂಲಕ್ಕೆ ಅನುಗುಣವಾಗಿ ಸಮಯವನ್ನು ನಿಗದಿಪಡಿಸಲಾಗುತ್ತದೆ. ಪ್ರಸ್ತುತ ಬೆಂಗಳೂರಿನಿಂದ ಬೆಳಿಗ್ಗೆ 10.30 ಕ್ಕೆ ಚಿಕ್ಕಬಳ್ಳಾಪುರಕ್ಕೆ ಆಗಮಿಸುವ ರೈಲು ಶಿಡ್ಲಘಟ್ಟ-ಚಿಂತಾಮಣಿ-ಶ್ರೀನಿವಾಸಪುರ-ಕೋಲಾರಕ್ಕೆ ಸುಮಾರು ಮಧ್ಯಾಹ್ನ 1 ಗಂಟೆಗೆ ತಲುಪಲಿದ್ದು ಮತ್ತೆ ಅಲ್ಲಿಂದ ಸಂಜೆ 4 ಗಂಟೆಗೆ ಚಿಕ್ಕಬಳ್ಳಾಪುರಕ್ಕೆ ಆಗಮಿಸಲಿದೆ. ನಂತರ ಬೆಂಗಳೂರಿಗೆ ಪ್ರಯಾಣಿಸಲಿದೆ ಎಂದು ಅಧಿಕಾರಿಗಳು ತಿಳಿಸುತ್ತಿದ್ದು, ಅಧಿಕೃತವಾಗಿ ಸಂಚಾರದ ಸಮಯವನ್ನು ಘೋಷಿಸಬೇಕಾಗಿದೆ. ಇದರ ಮಧ್ಯೆ ಬೆಳಿಗ್ಗೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ರೈಲು ಸಂಚರಿಸುವ ಸಮಯದಲ್ಲಿ ಕೊಂಚ ಬದಲಾಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ.




ಹೋರಾಟಕ್ಕೆ ಸ್ಫೂರ್ತಿ ಮುನಿಸ್ವಾಮಿ
1994ರಲ್ಲಿ ರೇಲ್ವೆ ಅಧಿಕಾರಿಗಳು ಹೋರಾಟಗಾರರನ್ನು ಬಂಧಿಸಿ ಹಳಿಗಳನ್ನು ತೆಗೆದುಕೊಂಡು ಹೋಗಿದ್ದಲ್ಲಿ ಸದರಿ ರೈಲು ಮಾರ್ಗದ ಪ್ರದೇಶ ಭೂಗಳ್ಳರ ಪಾಲು ಆಗುತ್ತಿತ್ತು. ಮತ್ತೆ ಇವರಿಂದ ಭೂ ಸ್ವಾಧೀನ ಕಷ್ಟವಾಗುತ್ತಿತ್ತು. ನಮ್ಮ ಹೋರಾಟದ ಫಲದಿಂದಾಗಿ ಹಳಿಗಳು ಉಳಿಯಿತಲ್ಲದೆ, ಹೊಸ ರೈಲು ಮಾರ್ಗದ ಕಾಮಗಾರಿ ನಡೆಯುವುದಕ್ಕೆ ಸಹಾಯವಾಗಿದೆ ಎಂದು ರೈಲು ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾಗಿದ್ದ ಎಂ.ಜಿ. ಪ್ರಭಾಕರ್ ನೆನಪು ಮಾಡಿಕೊಂಡಿದ್ದಾರೆ. ನಿವೃತ್ತಿಯಾದ ಮೇಲೆ ಆರಾಮವಾಗಿ ಇರಬೇಕಾಗಿದ್ದ ಮುನಿಸ್ವಾಮಿ ಜನರಿಗೆ ದೊಡ್ಡ ರೈಲಿನ ಸೌಕರ್ಯ ಕಲ್ಪಿಸಬೇಕೆಂಬ ಸದುದ್ದೇಶದಿಂದ ಹೋರಾಟಗಾರರಿಗೆ ಆತ್ಮಸ್ಥೈರ್ಯ ತುಂಬಿದರು. ಇಲ್ಲವಾದಲ್ಲಿ ಬ್ರಾಡ್ ಗೇಜ್ ರೈಲು ಮಾರ್ಗ ಕಾಣಲು ಸಾಧ್ಯವೇ ಆಗುತ್ತಿರಲಿಲ್ಲ. 30 ವರ್ಷಗಳ ನಂತರವಾದರೂ ರೈಲು ಮತ್ತೆ ಓಡಾಡುವಂತಾಗಿರುವುದರಿಂದ ಮುನಿಸ್ವಾಮಿ ಆತ್ಮಕ್ಕೆ ಈಗ ಶಾಂತಿ ಸಿಕ್ಕಿದಂತಾಗಿದೆ ಎಂದು ಮನದಾಳದ ಅಭಿಪ್ರಾಯ ಹೊರ ಹಾಕಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement