ಮೂಲ ಸೌಲಭ್ಯಗಳೇ ಇಲ್ಲದ ಟೇಕಲ್ ರೈಲ್ವೇ ನಿಲ್ದಾಣ
ಟೇಕಲ್: ಬ್ರಿಟೀಷರ ಕಾಲದಲ್ಲಿ ನಿರ್ಮಿಸಿರುವ ಟೇಕಲ್ ರೈಲು ನಿಲ್ದಾಣ ಮೂಲ ಸೌಕರ್ಯಗಳಿಂದ ದೂರ ಉಳಿದಿದೆ. ಪ್ರತಿ ದಿನ ಸುಮಾರು 4 ಸಾವಿರ ಮಂದಿ ಪ್ರಯಾಣಿಕರು ಇಲ್ಲಿಂದ ಹೊರಡುತ್ತಾರೆ. ಆದರೆ ನಿಲ್ದಾಣದಲ್ಲಿ ಪ್ರಯಾಣಿಕರ ನಿರೀಕ್ಷೆಯಂತೆ ಸೌಕರ್ಯಗಳಿಲ್ಲ.
ತಾಲೂಕು ಮಟ್ಟದಂತಿರುವ ಟೇಕಲ್ ರೈಲು ನಿಲ್ದಾಣ ನೋಡಲು ಸುಂದರವಾಗಿದೆ. ಆದರೆ ಒಳಗೆ ಬಹುತೇಕ ಸಮಸ್ಯೆಗಳಿವೆ. ಪ್ರತಿದಿನ ಓಡಾಡುವ ಮಾಲೂರು, ವೈಟ್ ಫೀಲ್ಡ್, ಕೃಷ್ಣರಾಜಪುರ, ಬೆಂಗಳೂರು ಮುಂತಾದ ಕಡೆ ನೂರಾರು ಜನ ಪ್ರಯಾಣಿಸುತ್ತಿದ್ದು ನಿಲ್ದಾಣದಲ್ಲಿ ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಶೌಚಾಲಯದ ಸೌಕರ್ಯ ಒದಗಿಸಿಲ್ಲ ಹಾಗೂ ರೈಲು ನಿಲ್ದಾಣಕ್ಕೆ ಸರಿಯಾದ ರಕ್ಷಣಾ ವ್ಯವಸ್ಥೆಇಲ್ಲವಾಗಿದೆ.
ಬೇಕಾಗಿರುವುದೇನು?: ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ತಂಗುದಾಣಗಳ ಹೆಚ್ಚಿಸುವುದು, ಶೌಚಾಲಯ ನಿರ್ಮಾಣ, ಪೊಲೀಸ್ ಚೌಕಿ ನಿರ್ಮಾಣವಾಗಬೇಕು, ಟೇಕಲ್ನಲ್ಲಿ ಮೇಲ್ಸೇತುವೆ ನಿರ್ಮಾಣ, ಜೋಲಾರ್ ಪೇಟೆ, ಮಾರಿಕುಪ್ಪಂ ಪ್ಯಾಸೆಂಜರ್, ಅರಕೋಣಂ ಪ್ಯಾಸೆಂಜರ್, ಪುಷ್ಪುಲ್ ರೈಲುಗಳಿಗೆ ಹೆಚ್ಚಿನ ಭೋಗಿಗಳನ್ನು ಅಳವಡಿಸಬೇಕು, ತಿರುಪತಿ ಪ್ಯಾಸೆಂಜರ್, ಮಾರಿಕುಪ್ಪಂ ನಿಂದ ಬೆಂಗಳೂರಿಗೆ ಹೊರಟಿರುವ ಮುಂಜಾನೆ ಬೆಂಗಳೂರು ಪುಷ್ಪುಲ್ ಟೇಕಲ್ನಲ್ಲಿ ನಿಲುಗಡೆಯಾಗಬೇಕು.
ಕೇಂದ್ರ ಸಚಿವರು ಹೇಳಿದ್ದೇನು?: 2009-10 ರಲ್ಲಿ ರೈಲ್ವೆ ಬಜೆಟ್ನಲ್ಲಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರು ಟೇಕಲ್ ರೈಲು ನಿಲ್ದಾಣಕ್ಕೆ 10 ಕೋಟಿ ರುಪಾಯಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲು ಮಂಡನೆಯಾಗಿತ್ತು ಹಾಗೂ ಜಿಪಂ, ತಾಪಂ ಚುನಾವಣೆ ಸಮಯದಲ್ಲಿ ಟೇಕಲ್ಗೆ ಬಂದ ವೇಳೆ ಸಚಿವರು ಕಾಮಗಾರಿ ಆದಷ್ಟು ಬೇಗ ಪ್ರಾರಂಭವಾಗುತ್ತದೆ ಎಂದು ತಿಳಿಸಿದ್ದರು. ಆದರೆ ಅದು ಈವರೆಗೂ ನೆರವೇರಿಲ್ಲ.
ಜಿಲ್ಲೆಯವರೇ ಆದ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರು ಹಿಂದೆ ಇಲ್ಲಿನ ಜನತೆಗೆ ಮಾಡಿದ ಸಹಾಯವೆಂದರೆ 2010 ಜನವರಿ 1 ರಿಂದ ಆಂಧ್ರರಾಜ್ಯದ ತಿರುಪತಿ ಪ್ರಯಾಣಿಕರಿಗಾಗಿ ತಿರುಪತಿ ಎಕ್ಸ್ಪ್ರೆಸ್ನ್ನು ನಿಲುಗಡೆ ಮಾಡಿದ್ದು ಬಹುತೇಕ ಪ್ರಯಾಣಿಕರಿಗೆ ಸಹಾಯವಾಗಿದೆ. ಅದನ್ನು ಜನವರಿ 2014 ರಿಂದ ಟೇಕಲ್ ನಿಲ್ದಾಣದಲ್ಲಿ ನಿಲುಗಡೆ ಇಲ್ಲವೆಂದು ರೈಲ್ವೆ ಇಲಾಖೆ ತಿಳಿಸಿದೆ. ಈ ಬಗ್ಗೆ ರೈಲ್ವೆ ಸಚಿವರು ಹಾಗೂ ಕೋಲಾರ ಜಿಲ್ಲೆಯವರೆ ಆದ ಕೆ.ಎಚ್. ಮುನಿಯಪ್ಪನವರು ಮನಸ್ಸು ಮಾಡಿ ಅವರ ಗಮನಕ್ಕೆ ತಂದರೆ ನೆನೆಗುದಿಗೆ ಬಿದ್ದಿರುವ ಬಹುತೇಕ ಕಾಮಗಾರಿಗಳು ಪ್ರಾರಂಭವಾಗುತ್ತದೆ ಎಂಬುದು ನಿತ್ಯ ಪ್ರಯಾಣಿಕರ ಮನವಿಯಾಗಿದೆ.
ಟೇಕಲ್ ಲಕ್ಷ್ಮೀಶ್