ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಖರ್ಗೆ ಅಸ್ತು, ರೈಲು ಬಂತು

Rashmi Kasaragodu
Updated On : 9 Nov 2013, 12:25 pm

ಕ.ಪ್ರ.ವಾರ್ತೆ   ಕೋಲಾರ   ನ. 8
ಕೋಲಾರ-ಚಿಕ್ಕಬಳ್ಳಾಪುರ ನಡುವೆ ನೂತನವಾಗಿ ಪರಿವರ್ತಿಸಲಾಗಿರುವ ಬ್ರಾಡ್ ಗೇಜ್ ರೈಲು ಮಾರ್ಗದ ಉದ್ಘಾಟನೆಗೆ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನಖರ್ಗೆಯವರು ಮನಸ್ಸು ಮಾಡಿದ್ದರಿಂದ ಹೋರಾಟಗಾರರ ಮತ್ತು ಜನತೆ ಕನಸು ನನಸಾಗುವಂತಾಗಿದೆ ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಪ್ರಶಂಸಿದರು.
ಬ್ರಾಡ್ ಗೇಜ್ ರೈಲು ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದವರೇ ಆದ ಮಲ್ಲಿಕಾರ್ಜುನಖರ್ಗೆ ಅಲ್ಲದೆ ಬೇರೆಯಾದರೂ ರೇಲ್ವೆ ಸಚಿವರಾಗಿದ್ದಲ್ಲಿ ಕನಿಷ್ಠ ಇನ್ನೂ ಆರು ತಿಂಗಳು ರೈಲು ಮಾರ್ಗದ ಉದ್ಘಾಟನೆ ವಿಳಂಬವಾಗುತ್ತಿತ್ತು ಎಂದು ತಿಳಿಸಿದರು.
ರೇಲ್ವೆ ಇಲಾಖೆಯ ಸುರಕ್ಷತಾ ವಿಭಾಗದ ಅಧಿಕಾರಿಗಳು ಪ್ರಮಾಣ ಪತ್ರ ನೀಡಲು ಹಿಂದು ಮುಂದು ನೋಡುತ್ತಿದ್ದಾಗ, ಸದರಿ ವಿಭಾಗದ ಅಧಿಕಾರಿಗಳನ್ನು ಕರೆಸಿಕೊಂಡು ಅಕ್ಟೋಬರ್ ತಿಂಗಳೊಳಗೆ ರೈಲು ಮಾರ್ಗದ ಸುರಕ್ಷತೆಗೆ ಸಂಬಂಧಿಸಿದ ವರದಿ ನೀಡುವಂತೆ ಸೂಚಿಸದ ಫಲದಿಂದಾಗಿ ಇಂದು ರೈಲು ಸಂಚಾರ ಆರಂಭಕ್ಕೆ ಸಹಾಯವಾಯಿತು ಎಂದು ಸಚಿವ ಖರ್ಗೆಯವರಿಗೆ ಕೃತಜ್ಞತೆ ಸಲ್ಲಿಸಿದರು.
ಮಾರಿಕುಪ್ಪಂ-ಕುಪ್ಪಂ , ಶ್ರೀನಿವಾಸಪುರ-ಮನದಪಲ್ಲಿ ನಡುವೆ ಅದಷ್ಟು ಬೇಗನೆ ರೈಲು ಮಾರ್ಗ ಆರಂಭಕ್ಕೆ, ಕೋಲಾರ-ವೈಟ್ ಫೀಲ್ಡ್ ನಡುವೆ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಕೋಲಾರದ ಅಂತರಗಂಗೆ ಸಮೀಪ ಕೋಲಾರ-ಚಿಕ್ಕಬಳ್ಳಾಪುರ ರೈಲು ನಿಲುಗಡೆಗಾಗಿ ಮಂಜೂರಾತಿ ನೀಡುವಂತೆ ಸಚಿವ ಕೆ.ಎಚ್. ಮುನಿಯಪ್ಪ ಮನವಿ ಮಾಡಿದರು.
ಹೊಸ ಪ್ಯಾಸೆಂಜರ್ ರೈಲಿನ ವೇಳೆಯನ್ನು ಮಾರ್ಪಡಿಸುವ ಸಂಬಂಧ ನಾಗರಿಕರ ಜೊತೆ ಚರ್ಚಿಸಿ ವೇಳೆ ನಿಗದಿ ಪಡಿಸುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ನೀರಿಗಾಗಿ ಬೇಡಿಕೆ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಬಹುತೇಕ ಶಾಸಕರು ರಸ್ತೆ, ರೈಲು ಸಿಕ್ಕಿದೆ, ಅಗತ್ಯವಾಗಿ ಬೇಕಾದ ಶಾಶ್ವತ ಕುಡಿಯುವ ನೀರು ಒದಗಿಸಲು ಕೇಂದ್ರ ಸಚಿವ ಮಲ್ಲಿಕಾರ್ಜುನಖರ್ಗೆಯವರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೆಂದರು. ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್, ಡಾ.ಪರಮಶಿವಯ್ಯ ವರದಿ ಜಾರಿಯಾಗದಿದ್ದರೆ ನೀರಿಗಾಗಿ ಇನ್ನಷ್ಟು ಬವಣೆ ಎದರಿಸಬೇಕಾಗುತ್ತದೆ ಎಂದರು.
ಅದಷ್ಟು ಬೇಗನೆ ಮುಳಬಾಗಿಲು-ಕೋಲಾರಕ್ಕೆ ರೈಲು ಸೌಕರ್ಯ ಕಲ್ಪಿಸುವಂತೆಯೂ ಮನವಿ ಮಾಡಿದರು.
ಮಾಲೂರಿನ ಶಾಸಕ ಕೋಡಿಹಳ್ಳಿ ಮಂಜುನಾಥನಾಗೌಡ ಮಾತನಾಡಿ, ಶಾಶ್ವತ ನೀರಾವರಿ ಯೋಜನೆ ಜಾರಿಗೆ ಬರದಿದ್ದರೆ ನಾವು ಜಿಲ್ಲೆಯಲ್ಲಿ ರಾಜಕಾರಣ ಮಾಡುವುದು ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡರು.
ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ರೈಲು ಸೌಕರ್ಯದ ಜೊತೆಗೆ ಶಾಶ್ವತ ನೀರಾವರಿಗೂ ದನಿ ಎತ್ತಿದರು. ಎತ್ತಿನ ಹೊಳೆ, ಪರಮಶಿವಯ್ಯ ಯೋಜನೆ ಜಾರಿಗೆ ಸರ್ಕಾರ ಮುಂದಾಗದಿದ್ದರೆ ಪಕ್ಷಾತೀತ ಹೋರಾಟ ನಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯನವರು, ಪಶ್ಚಿಮಘಟ್ಟದ ಜನರಿಗೆ ಪ್ರಾಣಿಗಳ ಮೇಲೆ ಕಾಳಜಿ. ಆದರೆ, ಕೋಲಾರದಲ್ಲಿ ಜನರು ನೀರಿಗಾಗಿ ಪ್ರಾಣ ಬಿಡುವಂತಾಗಿರುವುದು ಮಾತ್ರ ಅಲ್ಲಿನ ಜನರಿಗೆ ಅರ್ಥವಾಗುತ್ತಿಲ್ಲವೆಂದು ಖೇದ ವ್ಯಕ್ತಪಡಿಸಿದರು.
ಮತ್ತೊಬ್ಬ ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್, ಕೋಲಾರಕ್ಕೆ ಫುಶ್ ಫುಲ್ ರೈಲು ನೀಡುವಂತೆ ಸಚಿವ ಮಲ್ಲಿಕಾರ್ಜುನಖರ್ಗೆಯವರನ್ನು ಒತ್ತಾಯಿಸಿದರು. ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ರೇಲ್ವೆ ಕೋಚ್ ಘಟಕ ಮಂಜೂರು ಮಾಡಿದ್ದಾರೆ, ಇದಕ್ಕೆ ಎರಡು ತಿಂಗಳಲ್ಲಿ ಭೂಮಿ ಪೂಜೆ ಆಗಲಿ ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಶಾಸಕಿ ವೈ. ರಾಮಕ್ಕ, ವಿಧಾನ ಪರಿಷತ್ತಿನ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಬಿಸ್ಸೇಗೌಡ, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ತಾಪಂ ಅಧ್ಯಕ್ಷೆ ಭಾಗ್ಯಲಕ್ಷ್ಮೀನಾರಾಯಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಜಯದೇವ್, ಕುಮಾರ್, ಚಂದ್ರಾರೆಡ್ಡಿ, ಮಾಜಿ ಸಚಿವ ನಿಸಾರ್ ಅಹಮ್ಮದ್, ಜಿಪಂ ಸದಸ್ಯ ಅ.ಮು. ಲಕ್ಷ್ಮೀನಾರಾಯಣ, ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಲ್ಲಾ ಎಸ್ಪಿ ಡಾ. ರಾಮ್ ನಿವಾಸ್ ಸಪಟ್ ಸೇರಿದಂತೆ ಅನೇಕರು ಇದ್ದರು. ನೈರುತ್ಯ ರೈಲ್ವೆಯ ಜನರಲ್ಮ್ಯಾನೇಜರ್ ಸ್ವಾಗತಿಸಿ, ಅಗರವಾಲ್ ವಂದಿಸಿದರು.
ಸಚಿವ, ಶಾಸಕ ಗೈರು: ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮತ್ತು ಕೋಲಾರ ಕ್ಷೇತ್ರದ ಶಾಸಕ ವರ್ತೂರ್ ಆರ್. ಪ್ರಕಾಶ್ ಗೈರು ಹಾಜರಾಗಿದ್ದರು. ಕಾರ್ಯಕ್ರಮ ವೀಕ್ಷಣೆ ಮಾಡಲು ಕಾಂಗ್ರೆಸ್ ಮುಖಂಡರು ವಿವಿಧ ತಾಲೂಕುಗಳಿಂದ ಕಾರ್ಯಕರ್ತರಿಗಾಗಿ ಬಸ್ ವ್ಯವಸ್ಥೆ ಮಾಡಿದ್ದರು. ಹೊಸ ರೈಲು ನೋಡಲು ಜನ ಕಾತುರದಿಂದ ಕಾದು ನಿಂತು ಪ್ಯಾಸೆಂಜರ್ ರೈಲು ಕೋಲಾರ ನಿಲ್ದಾಣಕ್ಕೆ ಬಂದೊಡನೆಯೇ ಹರ್ಷೋದ್ಗಾರದಿಂದ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement