ದಶಕಗಳ ಕನಸು ನನಸಾಯ್ತು...
ಚಿಕ್ಕಬಳ್ಳಾಪುರ: ನಗರದ ರೈಲ್ವೆ ನಿಲ್ದಾಣದಿಂದ ಶುಭ ಶುಕ್ರವಾರ ನೂತನ ಚಿಕ್ಕಬಳ್ಳಾಪುರ-ಕೋಲಾರ ಮಾರ್ಗದ ರೈಲು ಸಂಚರಿಸುವ ಮೂಲಕ ಜನರ ಅನೇಕ ದಶಕಗಳ ಕನಸನ್ನು ನನಸು ಮಾಡಿತು.
ನಗರದ ನಂದಿ ರಂಗಮಂದಿರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈಲು ಸಂಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಸಮರ್ಪಕ ರೀತಿಯಲ್ಲಿ ಅಧಿಕಾರಿಗಳು ಪ್ರಚಾರವನ್ನು ಕೈಗೊಳ್ಳದ ಕಾರಣ ತರಾತುರಿಯಲ್ಲಿ ಅದ್ಧೂರಿ ಸಿದ್ಧತೆಗಳು ನಡೆದು ಹೋದವು. ಸಮರ್ಪಕವಾಗಿ ಮಾಹಿತಿ ಕೊಡುವವರು ಯಾರು ಇಲ್ಲದೇ ಈ ಭಾಗದ ಜನರು ಕೇವಲ ಅಂತೆ ಕಂತೆಗಳನ್ನು ಕೇಳಿಕೊಂಡು ಸಮಾಧಾನಪಡಬೇಕಾಯಿತು. ಇದೇ ಕಾರಣದಿಂದ ಮುಖ್ಯಮಂತ್ರಿಗಳಿಂದ ಹಿಡಿದು ಗಣ್ಯಾತಿ ಗಣ್ಯರು ಭಾಗವಹಿಸಿದ್ದರೂ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿರಲಿಲ್ಲ. ಆದರೆ, ರೈಲ್ವೆ ನಿಲ್ದಾಣದಲ್ಲಿ ಜನರು ತುಂಬಿ ತುಳುಕಾಡುತ್ತಿದ್ದರು.
ಕೋಲಾರ-ಚಿಕ್ಕಬಳ್ಳಾಪುರ ಮಾರ್ಗ ಸಂಚಾರದ ರೈಲಿಗೆ ಚಾಲನೆ ಸಿಗುವ ಕ್ಷಣವನ್ನು ಅಸ್ವಾಧಿಸಿ ಖುಷಿಪಟ್ಟರು. ಇನ್ನೂ ನಿರೀಕ್ಷೆಗಳು ಈಡೇರಬೇಕಾಗಿರುವುದರ ನಡುವೆ ಚಿಕ್ಕಬಳ್ಳಾಪುರ-ಕೋಲಾರಕ್ಕೆ ಸಂಪರ್ಕ ಕಲ್ಪಿಸುವ ರೈಲು ಸಂಚಾರವಾದರೂ ಪ್ರಾರಂಭವಾಗಿ ದಶಕಗಳ ಕನಸು ಕೊನೆಗೂ ನನಸಾಯಿತು ಎಂದು ಸಂಭ್ರಮಿಸಿದರು.
ನೂತನ ರೈಲು ಮಾರ್ಗ: ಸರ್.ಎಂ.ವಿ. ರವರ ಪರಿಶ್ರಮದಿಂದ ಬ್ರಿಟಿಷರ ಕಾಲದಲ್ಲಿಯೇ ಯಲಹಂಕ ಮತ್ತು ಬಂಗಾರಪೇಟೆ ನಡುವೆ ನ್ಯಾರೋಗೇಜ್ ರೈಲು ಓಡುತ್ತಿತ್ತು. ಆದರೆ, ಆದಾಯ ಬರುತ್ತಿಲ್ಲ ಎಂಬ ಕಾರಣದಿಂದ ರೈಲು ಸಂಚಾರವನ್ನು ನಿಲ್ಲಿಸಲಾಗಿತ್ತು. ಇದರಿಂದ ಈ ಭಾಗದ ಜನರು ಇಲ್ಲಿನ ರೈಲ್ವೆ ನಿಲ್ದಾಣ ಮತ್ತು ರೈಲು ಸಂಚಾರ ಅಭಿವೃದ್ಧಿಗಾಗಿ ಕಳೆದ ಅನೇಕ ದಶಕಗಳಿಂದಲೂ ಹೋರಾಟ ನಡೆಸಿಕೊಂಡು ಬಂದಿದ್ದು ಇದರ ಭಾಗವಾಗಿ 45 ಕಿ.ಮೀ ಉದ್ದದ ಯಲಹಂಕ ಮತ್ತು ಚಿಕ್ಕಬಳ್ಳಾಪುರ ಮಾರ್ಗದ ನ್ಯಾರೋಗೇಜನ್ನು ಬ್ರಾಡ್ ಗೇಜ್ ಅನ್ನಾಗಿ ಪರಿವರ್ತಿಸಿ 1996 ರಲ್ಲಿ ನೂತನ ರೈಲು ಸಂಚಾರವನ್ನು ಪ್ರಾರಂಭಿಸಿ ಜನರಿಗೆ ಅನುಕೂಲ ಮಾಡಿಕೊಡಲಾಯಿತು. ಉಳಿದಂತೆ ಚಿಕ್ಕಬಳ್ಳಾಪುರ-ಕೋಲಾರ ನಡುವೆ ಬ್ರಾಡ್ ಗೇಜ್ ಮಾರ್ಗವನ್ನಾಗಿ ಪರಿವರ್ತಿಸಲು ಜನರು ಒತ್ತಾಯಿಸಿದ್ದು 87 ಕಿ.ಮೀ ದೂರದ ಈ ಮಾರ್ಗಕ್ಕೆ ರೈಲ್ವೆ ಮಂಡಳಿ 2006-2007 ರಲ್ಲಿ ಅನುಮೋದನೆ ಪಡೆದು 2007 ರಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿತ್ತು. ಆದರೆ, ಬಂಡವಾಳದ ಕೊರತೆ, ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ಮೇಲ್ಸೇತುವೆಗಳ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದ್ದರಿಂದ ವಿಳಂಬವಾಗಿದ್ದು ಇದೀಗ 2013 ರಲ್ಲಿ 440 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಚಿಕ್ಕಬಳ್ಳಾಪುರ-ಕೋಲಾರ ಮಾರ್ಗದ ರೈಲಿನ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಈ ಮಾರ್ಗದಲ್ಲಿ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಗೊತ್ತಿಹಳ್ಳಿ, ಕೋಲಾರ 6 ಮಾದರಿ ರೈಲ್ವೆ ನಿಲ್ದಾಣಗಳು ಸೇರಲಿದ್ದು ಗಿಡ್ನಹಳ್ಳಿ, ವೈ. ಹುಣಸೇನಹಳ್ಳಿ, ದಾಲಸನೂರು ಮತ್ತು ಜನಿಘಟ್ಟ ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡಲಾಗುತ್ತದೆ.
ರೈಲು ಸಂಚಾರದ ಸಮಯ
76551 ಸಂಖ್ಯೆಯ ಪ್ಯಾಸೆಂಜರ್ ರೈಲು ಬೆಂಗಳೂರು ನಗರದಲ್ಲಿ ಬೆಳಿಗ್ಗೆ 8.40 ಕ್ಕೆ ಬಿಡಲಿದೆ. ಯಲಹಂಕ, ದೇವನಹಳ್ಳಿ ಮೂಲಕ ಚಿಕ್ಕಬಳ್ಳಾಪುರಕ್ಕೆ ಬೆಳಿಗ್ಗೆ 10.50 ಕ್ಕೆ ಬರಲಿದೆ. ನಂತರ 11.01 ಗಿಡ್ನಹಳ್ಳಿ, 11.09 ಕ್ಕೆ ಶಿಡ್ಲಘಟ್ಟ, 11.20ಕ್ಕೆ ವೈ ಹುಣಸೇನಹಳ್ಳಿ, 11.33 ಕ್ಕೆ ಚಿಂತಾಮಣಿ, 11.44 ಕ್ಕೆ ದೊಡ್ಡಘಟ್ಟ, 11.57 ಕ್ಕೆ ಶ್ರೀನಿವಾಸಪುರ, ಮಧ್ಯಾಹ್ನ 12.08 ಕ್ಕೆ ದಾಲ್ಸನೂರು, 12.14 ಕ್ಕೆ ಗೊತ್ತಿಹಳ್ಳಿ, 12.18 ಕ್ಕೆ ಜನಘಟ್ಟ, 1 ಗಂಟೆಗೆ ಕೋಲಾರ ತಲುಪಲಿದೆ. 76552 ಸಂಖ್ಯೆಯ ಪ್ಯಾಸೆಂಜರ್ ರೈಲು ಕೋಲಾರದಿಂದ ಮಧ್ಯಾಹ್ನ 1.45 ಕ್ಕೆ ಬಿಡಲಿದೆ, ಜನಘಟ್ಟ 2.58, ಗೊತ್ತಿಹಳ್ಳಿ 2.03, ದಾಲ್ಸನೂರು 2.09, ಶ್ರೀನಿವಾಸಪುರ 2.20, ದೊಡ್ಡಘಟ್ಟ 2.34, ಚಿಂತಾಮಣಿ 2.47, ಹುಣಸೇನಹಳ್ಳಿ 3.02, ಗಿಡ್ನಹಳ್ಳಿ 3.24, ಚಿಕ್ಕಬಳ್ಳಾಪುರ 3.53 ಕ್ಕೆ ಬರಲಿದೆ. ಆ ನಂತರ ಇಲ್ಲಿಂದ ಬೆಂಗಳೂರಿಗೆ ಹೊರಟು 6 ಗಂಟೆಗೆ ಸೇರಲಿದೆ.