ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಂಗಾರಪೇಟೆಯಿಂದ ಬೆಂಗಳೂರಿಗೆ ನೇರ ರೈಲು ಕೊಡಿ

Rashmi Kasaragodu
Updated On : 9 Nov 2013, 12:24 pm

ಬಂಗಾರಪೇಟೆ: ಪಟ್ಟಣದ ರೇಲ್ವೆ ನಿಲ್ದಾಣ ಜಂಕ್ಷನ್ ಆಗಿದ್ದರೂ ಇಲ್ಲಿಂದ ಬೆಂಗಳೂರಿಗೆ ಹೋಗಲು ಯಾವುದೇ ರೈಲುಗಳು ಇಲ್ಲ. ಎಲ್ಲ ರೈಲುಗಳು ಬೇರೆ ನಗರಗಳಿಂದ ಬರುತ್ತಿದ್ದು, ಇಲ್ಲಿಂದ ಹತ್ತುವ ಪ್ರಯಾಣಿಕರಿಗೆ ಆಸನಗಳಿಲ್ಲದೆ ಅವ್ಯವಸ್ಥೆ ಪಡುವಂತಾಗಿದೆ. ಹೀಗಾಗಿ ಪಟ್ಟಣದಿಂದಲೇ ಬೆಂಗಳೂರಿಗೆ ನೇರ ರೈಲನ್ನು ಕಲ್ಪಿಸಿಕೊಡಬೇಕೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸಾರ್ವಜನಿಕರ ಪರವಾಗಿ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು.
ಚಿಕ್ಕಬಳ್ಳಾಪುರದಿಂದ ಕೋಲಾರ ನಡುವೆ ನೂತನ ರೈಲು ಪ್ರಾರಂಭಕ್ಕೆ ಕೋಲಾರಕ್ಕೆ ಆಗಮಿಸಿದ ಸಚಿವರು ನಂತರ ಬಂಗಾರಪೇಟೆ ಮೂಲಕ ಬೆಂಗಳೂರಿಗೆ ಹೋಗುವ ದಾರಿಮಧ್ಯೆ ಈ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕ ನಾರಾಯಣಸ್ವಾಮಿ ಮಾತನಾಡಿ, ಕೋಲಾರದ ಹುದುಕುಲದಿಂದ ಬೆಂಗಳೂರಿಗೆ ನೂರಾರು ಜನರು ಹೋಗಿಬರುತ್ತಾರೆ. ಅವರಿಗೆ ಅನುಕೂಲವಾಗುವಂತೆ ಹುದುಕುಲದಲ್ಲಿ ಕೋಲಾರ ರೈಲು ನಿಲುಗಡೆ ಮಾಡಬೇಕು. ಅದೇ ರೀತಿಯಲ್ಲಿ ಚಿನ್ನಕೋಟೆ ಬಳಿ ಸಹ ಕೆಜಿಎಫ್ ರೈಲನ್ನು ನಿಲ್ಲಿಸಿದರೆ ಅನೇಕ ಪ್ರಯಾಣಿಕರಿಗೆ ನೆರವಾಗಲಿದೆ ಎಂದು ಕೋರಿದರು.
ಅಂಡರ್ ಪಾಸ್ ವಿಸ್ತರಿಸಿ: ಪಟ್ಟಣದಿಂದ ತಮಿಳುನಾಡಿನ ಹೊಸೂರಿಗೆ ಹೊಸ ರೈಲು ಮಾರ್ಗ ಕಲ್ಪಿಸಿಕೊಟ್ಟರೆ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ಜೊತೆಗೆ ಕಾಕಿನಾಡ ಎಕ್ಸ್ಪ್ರೆಸ್ ರೈಲನ್ನು ಕಾಮುಸಮುದ್ರದಲ್ಲಿ ನಿಲುಗಡೆಗೆ ಸೂಚನೆ ನೀಡಬೇಕು ಎಂದೂ ಮನವಿ ಮಾಡಿದ ಶಾಸಕರು, ಚಿಕ್ಕಬಳ್ಳಾಪುರದಿಂದ ಕೋಲಾರಕ್ಕೆ ಬರುವ ರೈಲನ್ನು ಬಂಗಾರಪೇಟೆವರೆಗೂ ವಿಸ್ತರಿಸಬೇಕು. ಹುದುಕುಳ ಬಳಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್ ಮಾರ್ಗದ ಅಗಲ ವಿಸ್ತರಿಸಬೇಕು. ಇಲ್ಲದಿದ್ದರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಲಿದೆ ಎಂದು ಕೋರಿದರು.
ಎಲ್ಲಾ ಬೇಡಿಕೆಗಳನ್ನು ಆಲಿಸಿದ ಸಚಿವ ಮಲ್ಲಿಕಾರ್ಜುನ ಖರ್ಗೆ, ಈ ಎಲ್ಲಾ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಭರವಸೆ ನೀಡಿದರು. ಇದರಿಂದ ಪ್ರಯಾಣಿಕರ ಬಹುದಿನಗಳ ಕನಸು ನನಸಾಗಲಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರ್ಥಸಾರಥಿ, ಮಂಜುನಾಥ್, ಪುರಸಭೆ ಸದಸ್ಯರಾದ ಕೆ.ಚಂದ್ರಾರೆಡ್ಡಿ, ಶಫಿ, ವೆಂಕಟೇಶಗೌಡ, ಗಂಗಮ್ಮ, ಮಾಜಿ ಅಧ್ಯಕ್ಷ ಶಂಷುದ್ದಿನ್ ಬಾಬು, ರಂಗರಾಮಯ್ಯ, ಪ್ರಸಾದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement