ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಮಗಾರಿ ಪರಿಶೀಲಿಸಿದ ಶಾಸಕ ನಾರಾಯಣಸ್ವಾಮಿ

Rashmi Kasaragodu
Updated On : 10 Nov 2013, 12:25 pm

ಬಂಗಾರಪೇಟೆ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ತಾಲೂಕಿನ ಹಲವು ಗ್ರಾಮಗಳಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಶುಕ್ರವಾರ ದಿಢೀರನೆ ಭೇಟಿ ನೀಡಿ ಪರಿಶೀಲಿಸಿದರು.
ಕ್ಷೇತ್ರದ ಮಾವಹಳ್ಳಿ, ಯಲಬುರ್ಗಿ, ಕಾವರನಹಳ್ಳಿ, ಚಿಕ್ಕವಲಗಮಾದಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ರಸ್ತೆ ವಿಸ್ತೀರ್ಣ ಡಾಂಬರೀಕರಣ, ಚರಂಡಿಗಳ ನಿರ್ಮಾಣ ಮತ್ತಿತರೆ ಕಾಮಗಾರಿಗಳು ಒಟ್ಟು 11ಕೋಟಿ ವೆಚ್ಚದಲ್ಲಿ ನಡೆಯುತ್ತಿವೆ. ಈ ಕಾಮಗಾರಿ ಪೂರ್ಣಗೊಂಡು ಮೂರು ತಿಂಗಳೊಳಗೆ ಡಾಂಬರು ಕಿತ್ತು ಹೋಗಿ ಹಳೇ ಸ್ಥಿತಿಗೆ ರಸ್ತೆಗಳು ಬರುತ್ತಿವೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಗ್ರಾಮಸ್ಥರ ದೂರಿನ ಮೇರೆಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ದಿಢೀರ್ ಭೇಟಿ ನೀಡಿದ್ದರು. ಅಲ್ಲದೆ, ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡುವಂತೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದಲ್ಲದೆ, ಸ್ಥಳವನ್ನು ಪರಿಶೀಲಿಸಿದರು.
ಕೆಲವು ಕಡೆ ಕಾಮಗಾರಿಯಲ್ಲಿ ನ್ಯೂನ್ಯತೆ ಕಂಡುಬಂತು. ಅದನ್ನು ಸರಿಪಡಿಸಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ರಸ್ತೆಗಳ ಸುಧಾರಣೆಗೆ ಹೆಚ್ಚಿನ ಒತ್ತುಕೊಟ್ಟಿವೆ. ಆದರೆ ಗುತ್ತಿಗೆದಾರರ ಕೈ ಚಳಕದಿಂದಾಗಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಪೂರ್ಣಗೊಂಡ ಕೆಲ ತಿಂಗಳಲ್ಲೇ ಕಳಪೆ ಕಾಮಗಾರಿಯಿಂದ ರಸ್ತೆಗಳು ಮತ್ತೆ ಹಾಳಾಗುತ್ತಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ಪೋಲಾಗುತ್ತಿದೆ. ಇದಕ್ಕೆ ಅವಕಾಶ ಕೊಡದೆ ಕಾಮಗಾರಿ ನಡೆಯುವಾಗಲೆ ಗುಣಮಟ್ಟ ಪರಿಶೀಲಿಸಲು ಈ ಭೇಟಿ ನೀಡಲಾಗಿದೆ ಎಂದರು.
ಹಳ್ಳಿಗಳಿಗೆ ಸಂಪರ್ಕ ರಸ್ತೆ: ಮುಂದಿನ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಯಾವ ಗ್ರಾಮವೂ ಉತ್ತಮ ರಸ್ತೆಗಳಿಂದ ವಂಚಿತವಾಗದಂತೆ ಮತ್ತು ಎಲ್ಲಾ ಹಳ್ಳಿಗಳಿಗೂ ಮುಖ್ಯರಸ್ತೆಯಿಂದ ಸಂಪರ್ಕ ರಸ್ತೆಗಳನ್ನು ನಿರ್ಮಾಣ ಮಾಡುವುದಾಗಿ ಹೇಳಿದರು.
ಶಾಸಕರ ಭೇಟಿ ವೇಳೆ ಗ್ರಾಮಗಳಲ್ಲಿ ಗ್ರಾಮಸ್ಥರು ಹಲವು ಸಮಸ್ಯೆಗಳನ್ನು ಹೇಳಿಕೊಂಡರು. ಶಾಸಕರು ಸಮಸ್ಯೆಗಳಿಗೆ ಸ್ಪಂದಿಸಿದ ರೀತಿ ಗ್ರಾಮಸ್ಥರನ್ನು ಪುಳಕಿತಗೊಳಿಸಿತು. ಶಾಸಕರ ಜೊತೆ ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಮುಖಂಡರಾದ ರವಿ, ಅಶ್ವಥನಾರಾಯಣಗೌಡ, ಗುತ್ತಿಗೆದಾರ ಎಸ್.ಮುರಳಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement