ಪತಿ ಕೊಂದ ಪತ್ನಿ ಮಂಜುಳಾ ಬಂಧನ
ಚಿಂತಾಮಣಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಗಂಡನನ್ನೇ ಕೊಲೆ ಮಾಡಿದ ಆರೋಪಿ ಶಿಕ್ಷಕಿ ಟಿ.ವಿ.ಮಂಜುಳನನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.
ತಾಲೂಕಿನ ದೊಡ್ಡಹಳ್ಳಿಯ ನರಸರಾಜುವಿನ 2ನೆ ಪತ್ನಿ ಟಿ.ವಿ.ಮಂಜುಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಈಕೆಗೆ ವಿಜಯ್ ಎಂಬುವನೊಂದಿಗೆ ಅಕ್ರಮ ಸಂಬಂಧ ಇತ್ತು. ಇವರಿಬ್ಬರೂ ಸಂಚು ರೂಪಿಸಿ ನರಸರಾಜುವನ್ನು ಕಳೆದ ಏಪ್ರಿಲ್ನಲ್ಲಿ ಪಟ್ಟಣದ ಟ್ಯಾಂಕ್ ಬಂಡ್ ರಸ್ತೆಯ ಮನೆಯಲ್ಲಿ ರಾತ್ರಿ ಊಟದಲ್ಲಿ ವಿಷ ಬೆರೆಸಿ ಕೊಲೆ ಮಾಡಿದ್ದಾರೆ. ನಂತರ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಹೈಡ್ರಾಮ ನಡೆಸಿದ ಮಂಜುಳ ನಡವಳಿಕೆ ಬಗ್ಗೆ ಮೊದಲನೆಯ ಹೆಂಡತಿ ಮಕ್ಕಳು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು.ಜೂನ್ 11ರಂದು ಚಿಕ್ಕ ಬಳ್ಳಾಪುರ ಉಪ ವಿಭಾಗ ಅಧಿಕಾರಿ ಶಾಂತಲ ಹಾಗೂ ತಾಲೂಕು ದಂಡಾಧಿಕಾರಿ ಎಂ.ಎನ್.ಮಂಜುನಾಥ್ ಸಮ್ಮುಖದಲ್ಲಿ ಬೆಂಗಳೂರು ವೈದ್ಯರ ತಂಡದೊಂದಿಗೆ ಮರು ಶವಪರೀಕ್ಷೆಯನ್ನು ನಡೆಸಲಾಗಿತ್ತು. ಶವ ಪರೀಕ್ಷೆಯಲ್ಲಿ ನರಸರಾಜು ವಿಷದಿಂದಲೇ ಮೃತ ಪಟ್ಟಿರುವುದಾಗಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿ ಅನೈತಿಕ ಸಂಬಂಧ ಹೊಂದಿದ್ದ ಯುವಕ ವಿಜಯ್ನನ್ನು 2 ದಿನದ ಹಿಂದೆಯೇ ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದರು. ಪ್ರಮುಖ ಆರೋಪಿ ಶಿಕ್ಷಕಿ ಟಿ.ವಿ.ಮಂಜುಳ ಮಾತ್ರ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದಳು.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಡೆಗೂ ಶುಕ್ರವಾರ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕದರಿ ತಾಲೂಕಿನ ಕೋಟಗುಲ್ಲ ಗ್ರಾಮದಲ್ಲಿ ಬಂಧಿಸಿದ್ದಾರೆ. ಅಪರಾಧ ವಿಭಾಗದ ಸಬ್ಇನ್ಸ್ಪೆಕ್ಟರ್ ಬಸವರಾಜು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.