ಬೇಡಿಕೆ ಈಡೇರಿಕೆಗೆ ವಿಧಾನಸೌಧ ಚಲೋ
ಕ.ಪ್ರ.ವಾರ್ತೆ ಕೋಲಾರ ನ. 9
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕನಿಷ್ಠ ಒಂದು ಸಾವಿರ ರು. ಪಿಂಚಣಿ ಹಾಗೂ ಕಲ್ಯಾಣ ಮಂಡಳಿಯ ಪ್ರತಿದಿನದ ಸುಗಮ ಕೆಲಸಕ್ಕಾಗಿ ಪೂರ್ಣಾವಧಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಕ ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ಪ್ರಾಯೋಜಿತ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ನ.12 ರಂದು ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಫೆಡರೇಷನ್ ರಾಜ್ಯಾಧ್ಯಕ್ಷ ವೀರಾಸ್ವಾಮಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಟ್ಟಡ ಕಾರ್ಮಿಕರಿಂದ ಸಂಗ್ರಹಣೆ ಮಾಡುವ ಸದಸ್ಯತ್ವ ಶುಲ್ಕವನ್ನು ರಾಜ್ಯ ಸರ್ಕಾರ ಕಲ್ಯಾಣ ಮಂಟಪ, ಸಮುದಾಯ ಭವನ ಸೇರಿದಂತೆ ಇತರ ಯೋಜನೆಗಳಿಗೆ ಬಳಕೆ ಮಾಡದೆ, ಕಾರ್ಮಿಕರ ಕಲ್ಯಾಣಕ್ಕಾಗಿ ಬಜೆಟ್ನಲ್ಲಿ ಮೀಸಲಿಡುವ ಅನುದಾನದಲ್ಲಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಅಸಂಘಟಿತ ಕಾರ್ಮಿಕ ವಲಯದಲ್ಲಿ ಗುರುತಿಸಿಕೊಂಡಿರುವ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರು ವಿವಿಧ ಕೆಲಸಗಳಲ್ಲಿ ತಮ್ಮನ್ನು ತೋಡಗಿಸಿಕೊಂಡು ಸರ್ಕಾರಕ್ಕೆ ತೆರಿಗೆ ಸಿಗುವುದಕ್ಕೆ ಕಾರಣಕರ್ತರಾಗಿದ್ದಾರೆ. ದುಡಿಯವ ಶಕ್ತಿಗಳ ಪರವಾಗಿ ಸಿಐಟಿಯು ಮತ್ತು ಫೆಡರೇಷನ್ ನಡೆಸಿದ ಹೋರಾಟದ ಫಲದಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರಚನೆ ಮಾಡಿದ್ದು ಇದರಿಂದ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ವಿವಾಹದ ಸಹಾಯಧನ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ, ವೈದ್ಯಕೀಯ ಸೌಲಭ್ಯಗಳು, ಅಪಘಾತ ಪರಿಹಾರ, ಅಂತ್ಯ ಸಂಸ್ಕಾರ, ಮಾಸಿಕ ಪಿಂಚಣಿ ಸೇರಿದಂತೆ 12 ವಿವಿಧ ರೀತಿಯ ಸೌಲಭ್ಯಗಳನ್ನು ರಾಜ್ಯದಲ್ಲಿ ಜಾರಿಗೆ ತಂದಿದೆಯಾದರೂ ಈ ಸೌಲಭ್ಯಗಳನ್ನು ಪಡೆಯಲು ಹೆಚ್ಚಿನ ಕಾರ್ಮಿಕರು ಸಂಘಟತರಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಅಂತಹ ಕಾರ್ಮಿಕರನ್ನು ಸಂಘಟಿಸಿ ಅವರಲ್ಲಿ ಅರಿವು ಮೂಡಿಸಿ ಕಲ್ಯಾಣ ಮಂಡಳಿಯ ಸೌಲಭ್ಯಗಳನ್ನು ದೊರೆಯುವಂತೆ ಮಾಡಬೇಕಾಗಿದೆ ಎಂದು ವೀರಾಸ್ವಾಮಿ ಆಗ್ರಹಿಸಿದರು.
ಕಾಯಂ ಸಿಇಒ ನೇಮಕವಾಗಲಿ: ನೊಂದಣಿಯಾದ ಕಾರ್ಮಿಕರಿಗೆ ಸಕಾಲಕ್ಕೆ ಸೌಲಭ್ಯಗಳನ್ನು ಕಲ್ಪಿಸಿದರೆ ಹೊಸ ಕಾರ್ಮಿಕರು ನೊಂದಣಿ ಮಾಡಿಕೊಳ್ಳಲು ಮಂದೆ ಬರುತ್ತಾರೆ. ಆದರೆ, ಇತ್ತೀಚೆಗೆ ಕಲ್ಯಾಣ ಮಂಡಳಿಯಲ್ಲಿ ಯಾವುದೇ ಸೌಲಭ್ಯಗಳನ್ನು ಪಡೆಯಲು ವಿಳಂಬವಾಗುತ್ತಿದೆ. ಕಲ್ಯಾಣ ಮಂಡಳಿಗೆ ಮುಖ್ಯವಾಗಿ ಕಾಯಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ನೇಮಿಸದಿರುವುದೇ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ದೂರಿದರು.
ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಮಿಕರ ನೋಂದಣಿ ನವೀಕರಣ, ತ್ವರಿತವಾಗಿ ಸೌಲಭ್ಯದ ಹಣ ವಿತರಿಸಲು ಅಗತ್ಯ ಸಿಬ್ಬಂದಿ ಮತ್ತು ಸುಸ್ಥಿರ ಕಚೇರಿ ವ್ಯವಸ್ಥೆ ಮಾಡಬೇಕು. 2013ರ ಫೆಬ್ರವರಿ 1 ರಿಂದ ಜಾರಿಗೊಂಡಿರುವ ಕಾರ್ಮಿಕ ಕಲ್ಯಾಣ ಮಂಡಳಿ ತೀರ್ಮಾನದ ಆಧಿಸೂಚನೆಯಲ್ಲಿ ಪರಿಷ್ಕರಿಸಿದ ಕಟ್ಟಡ ಕಾರ್ಮಿಕರ ಎಲ್ಲಾ ಸೌಲಭ್ಯಗಳನ್ನು ತಕ್ಷಣವೇ ಜಾರಿಗೆ ತರಬೇಕು. ಕಲ್ಯಾಣ ಮಂಡಳಿಯಲ್ಲಿರುವ ಕಟ್ಟಡ ಕಾರ್ಮಿಕರ ವಿವಿಧ ಯೋಜನೆಗಳ ಹಣವನ್ನು ಹೆಚ್ಚಿಸಲು ಮಾತ್ರ ಬಳಕೆ ಮಾಡಿಕೊಂಡು ಯಾವುದೇ ಕಾರಣಕ್ಕೂ ಕಲ್ಯಾಣ ಮಂಟಪ ಸೇರಿದಂತೆ ಇತರ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಕಲ್ಯಾಣ ನಿಧಿಯಲ್ಲಿರುವ 800 ಕೋಟಿ ರು.ಗಳನ್ನು ಖರ್ಚು ಮಾಡದಂತೆ ಒತ್ತಾಯಿಸಿದರು.
ಕಟ್ಟಡ ಕಾರ್ಮಿಕರಿಗೆ ನೀಡುವ ವಿವಾಹದ ಸೌಲಭ್ಯದ ಹಣ ಬಿಡುಗಡೆಗೆ ಸಾವಿರಾರು ರುಪಾಯಿ ಖರ್ಚು ಮಾಡಿ ವಿವಾಹ ನೊಂದಣಿ ಮಾಡಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿರುವ ಕಾರ್ಮಿಕರಿಗೆ ಏಕಾಏಕಿ ವಂತಿಗೆಯ ಬಾಕಿ ನೆಪದಲ್ಲಿ ಸೌಲಭ್ಯ ವಂಚಿಸಿರುವುದು ಸರಿಯಲ್ಲ. ನರ ಮತ್ತು ಮೆದುಳ ಹಾಗೂ ಹೃದಯ ಸಂಬಂಧಿಸಿದ ಕಾಯಿಲೆಗಳು ಸೇರಿದಂತೆ ಹೊರ ರೋಗಿಗಳಾಗಿ ಮನೆಯಲ್ಲೇ ದೀರ್ಘಾವಧಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರಿಗೆ ಆರೋಗ್ಯ ಸೇವೆಯನ್ನು ವಿಸ್ತರಿಸಬೇಕು. ರಾಷ್ಟ್ರೀಯ ಸ್ವಸ್ಥಾ ಭೀಮಾ ಯೋಜನೆಗೆ ಕಾರ್ಮಿಕರನ್ನು ಒಳಪಡಿಸಿ ಅವರಿಗೆ ಸ್ಮಾರ್ಟ್ ಕಾರ್ಡ್ ನೀಡಬೇಕು ಹಾಗೂ ವಸತಿ ಯೋಜನೆ ಜಾರಿಗೆ ತರುವಂತೆ ಒತ್ತಾಯಿಸಿ ನ.14 ರಂದು ವಿಧಾನಸೌಧ ಚಲೋವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ವಂತಿಗೆ ಹಣಕ್ಕೆ ರಸೀದಿ ಬೇಕು: ಕಟ್ಟಡ ಕಾರ್ಮಿಕರು ವಂತಿಗೆ ಹಣವನ್ನು ಪಾವತಿಸಿದ್ದಕ್ಕೆ ರಸೀದಿಯನ್ನು ನೀಡಬೇಕು, ಕಟ್ಟಡ ಕಾರ್ಮಿಕ ಸಂಘಗಳಿಗೆ ನೀಡುವ ಪ್ರೋತ್ಸಾಹ ಧನವನ್ನು ಸಕಾಲಕ್ಕೆ ನೀಡಬೇಕು, ನೊಂದಣಿ ಮತ್ತು ಸೌಲಭ್ಯ ವಿತರಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಬಂಗಾರಪೇಟೆ ಕಾರ್ಮಿಕ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ಇತರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಕಟ್ಟಡ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾಧ್ಯಕ್ಷ ಶ್ರೀನಿವಾಸಪ್ಪ, ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ಯಲ್ಲಪ್ಪ, ಖಜಾಂಚಿ ವಿ. ಆನಂದ್, ಎಂ. ಶ್ರೀನಿವಾಸ್, ಎಂ. ಭೀಮರಾಜ್, ನಾಗರಾಜಪ್ಪ, ಪ್ರಸನ್ನ ಇದ್ದರು.