ಮಕ್ಕಳನ್ನು ಕೆಲಸಕ್ಕೆ ದೂಡದೆ ಶಿಕ್ಷಣ ಕೊಡಿಸಿ
ಕ.ಪ್ರ.ವಾರ್ತೆ ಕೆಜಿಎಫ್ ನ. 9
ದೇಶದ ಮುಂದಿನ ಉತ್ತಮ ಜೀವನ ರೂಪಿಸುವ ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಯಲ್ಲಿ ತೊಡಗಿಸುವುದು ಕಾನೂನಿನಡಿಯಲ್ಲಿ ಅಪರಾಧ. ಹೀಗಾಗಿ ಇಂತಹ ಮಕ್ಕಳ ಪೋಷಕರು ಹಾಗೂ ತಂದೆ ತಾಯಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳುಹಿಸದೆ ಅವರಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಎಸ್.ಮಮದಾಪುರ್ ಹೇಳಿದರು.
ನಗರದ ಗಾಂಧಿ ವೃತ್ತದಲ್ಲಿ ಬಂಗಾರಪೇಟೆ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕೋಲಾರ ಜಿಲ್ಲಾ ಬಾಲಕಾರ್ಮಿಕ ನೇಮಕಾತಿ ನಿರ್ಮೂಲನಾ ಪ್ರಚಾರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬಾಲಕಾರ್ಮಿಕ ನೇಮಕಾತಿ ನಿರ್ಮೂಲನಾ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಿವಿಲ್ ನ್ಯಾಯಾಧೀಶ ಆರ್.ಪಿ.ನಂದೀಶ್ ಮಾತನಾಡಿ, 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವುದು ಅಪರಾಧ. ಇಂತಹ ಮಕ್ಕಳ ಭವಿಷ್ಯವನ್ನು ಪೋಷಕರೇ ರೂಪಿಸಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಪೋಷಕರೇ ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ಆರ್ಥಿಕಬಾಧೆ ಮತ್ತು ಸಂಕಷ್ಟದ ಜೀವನದ ಉದಾಹರಣೆಗಳನ್ನು ನೀಡುತ್ತಿದ್ದಾರೆ ಎಂದರು.
ಜೀವನ ಹಾಳು ಮಾಡಬೇಡಿ: ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿವಿಧ ರೀತಿಯ ಯೋಜನೆಗಳನ್ನು ಜಾರಿಗೊಳಿಸಿದೆ. ಎಲ್ಲಾ ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆಯನ್ನು ಮಾಡಿದೆ. ಹೀಗಾಗಿ ಈ ಬಗ್ಗೆ ಅರಿವು ಬೆಳೆಸಿಕೊಂಡು ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳುಹಿಸಿ ಅವರ ಜೀವನ ಹಾಳುಮಾಡದೆ ಅವರಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್ ಸೆಫಟ್ ಅವರು ಬಾಲಕಾರ್ಮಿಕ ಜಾಗೃತಿ ಛಾಯಾಚಿತ್ರ ಮತ್ತು ಸಾಕ್ಷ್ಯಚಿತ್ರಗಳ ಪ್ರದರ್ಶನ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಜೈನ್ ಯುವಕ ಮಂಡಲ್ ಅಧ್ಯಕ್ಷ ಸುನಿಲ್ಕುಮಾರ್, ಕಾರ್ಯದರ್ಶಿ ಮಹೇಂದ್ರಕುಮಾರ್ ಮುನೋತ್, ಕಾರ್ಮಿಕ ನಿರೀಕ್ಷಕ ಸೈಯದ್ಜಾಕೀರ್, ಸಹಾಯಕ ಸರ್ಕಾರಿ ಅಭಿಯೋಜಕ ಜಗದೀಶ್ಕುಮಾರ್, ವಕೀಲರಾದ ಆನಂದರಾಮಯ್ಯ, ಕೆ.ಆರ್.ಧನರಾಜ್, ಕಲೈಸೆಲ್ವಿ ಹಾಜರಿದ್ದರು.