ಮೋದಿ ಸಮಾವೇಶಕ್ಕೆ ಟಿಕೆಟ್ ಮಾರಾಟ
ಗುಡಿಬಂಡೆ: ನ.17 ರಂದು ಬೆಂಗಳೂರಿನಲ್ಲಿ ನಡೆಯುವ ನರೇಂದ್ರ ಮೋದಿ ಸಮಾವೇಶಕ್ಕೆ ಪ್ರವೇಶ ಶುಲ್ಕ 10 ರೂಪಾಯಿಗಳ ಟಿಕೆಟ್ ಮಾರಾಟ ಪಟ್ಟಣದಲ್ಲಿ ನಡೆಯಿತು.
ಪಟ್ಟಣದ ಕೋಟೆ ಬೀದಿಯ ರಾಮಮಂದಿರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಭ್ರಷ್ಟ ಆಡಳಿತದ ವಿರುದ್ಧ ಜಾಗೃತಿ ಕರಪತ್ರಗಳನ್ನು ಹಂಚಿದರು. ಈ ವೇಳೆ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ್ ರೆಡ್ಡಿ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಜಿ.ಎ.ಅಮರೇಶ್, ಗೂಳೂರು ಲಕ್ಷ್ಮೀನಾರಾಯಣ, ಮಲ್ಲಿಕಾರ್ಜುನರೆಡ್ಡಿ, ಪ್ರದೀಪ್, ರಘು, ಗೋಪಾಲ್, ಬಿಳ್ಳೂರು ಪ್ರಸಾದ್, ವಿಷ್ಣುವರ್ಧನರೆಡ್ಡಿ ಇದ್ದರು.
ವಿದ್ಯಾರ್ಥಿ ವೇತನದ ಚೆಕ್ ವಿತರಣೆ
ಚಿಂತಾಮಣಿ: ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ವಿಧಾನಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಕರೆ ನೀಡಿದರು. ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಗೊಂಡ ವಿದ್ಯಾರ್ಥಿ ವೇತನದ ಚೆಕ್ ನೀಡಿ ಮಾತನಾಡಿ, ದಲಿತ ವಿದ್ಯಾರ್ಥಿಗಳು ಶೈಕ್ಷಣಿವಾಗಿ ಅಭಿವೃದ್ಧಿ ಹೊಂದಲು ಸರ್ಕಾರ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದರೂ ಹಲವು ಅಧಿಕಾರಿಗಳು ಬೇಜವಾಬ್ದಾರಿ ತನದಿಂದ ಅರ್ಹ ಫಲಾನುಭವಿಗಳ ಕೈಸೇರಲು ವಿಳಂಬವಾಗುತ್ತಿದೆಯೆಂದು ಅಸಮದಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕ ಶಾಂತಮ್ಮ, ಅಮರನಾಥಗುಪ್ತ, ಶೈಲಶ್ರೀ ಸೇರಿದಂತೆ ಎಬಿವಿಪಿ ವಿದ್ಯಾರ್ಥಿ ಮುಖಂಡರಾದ ಮಂಜುನಾಥರೆಡ್ಡಿ, ಸುರೇಶ, ವಿಜಯ್, ಲಕ್ಷ್ಮಣ್, ನವಾಜ್ ಇದ್ದರು.
ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆಗೆ ಚಾಲನೆ
ಕೋಲಾರ: ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಪ್ರಾರಂಭವಾಗಿದ್ದು ತಾಲೂಕಿನ ಅರಾಭಿಕೊತ್ತನೂರು ಕ್ಲಸ್ಟರ್ ವ್ಯಾಪ್ತಿಯಲ್ಲಿ ಇತರೆ ಶಾಲೆಗಳಿಗೆ ಸೇರಿದ ಮಕ್ಕಳ ಜಾಡು ಹಿಡಿಯುವ ಪ್ರಕ್ರಿಯೆಗೆ ಸಿ.ಆರ್.ಪಿ ಮಂಜುನಾಥ್ ಚಾಲನೆ ನೀಡಿದರು. ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಡಿ.ಆಶಾ ಪ್ರಕ್ರಿಯೆಯ ಮೇಲ್ಚಿಚಾರಕರಾಗಿದ್ದು, ವಿವಿಧ ಶಾಲೆಗಳಿಗೆ ವರ್ಗಾವಣೆಗೊಂಡ ಮಕ್ಕಳ ವಿವರ ಸಂಗ್ರಹಿಸಿದರು. ಸಮೀಕ್ಷೆಯಲ್ಲಿ ಕ್ಲಸ್ಟರ್ ಹಿರಿಯ ಶಿಕ್ಷಕ ಎಸ್. ಅನಂತಪದ್ಮನಾಭ್, ಮುಖ್ಯ ಶಿಕ್ಷಕ ಮಂಜುನಾಥ್, ರಮೇಶ್, ವೆಂಕಟೇಶಪ್ಪ, ಭಾರತಿ, ಅಶ್ವತ್ಥಪ್ಪ ಕೆ.ಟಿ. ಪುಷ್ಪ, ಸುಬ್ರಹ್ಮಣ್ಯಾಚಾರಿ, ಖಲೀಂ, ಭಾಗ್ಯಮ್ಮ ಇದ್ದರು.
ಕಸದ ಸಮಸ್ಯೆಗೆ ಮುಕ್ತಿ ಎಂದು?
ಬಂಗಾರಪೇಟೆ: ಪಟ್ಟಣದಲ್ಲಿ ಕಸವಿಲೇವಾರಿ ದೊಡ್ಡ ಸಮಸ್ಯೆಯಾಗಿದ್ದು ಎಲ್ಲಿ ನೋಡಿದರೂ ಕಸದ ರಾಶಿ ಕೊಳೆಯುತ್ತಿದ್ದರೂ ಪುರಸಭೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಇತ್ತೀಚಿಗೆ ಬಿದ್ದ ಮಳೆ, ಆಯುಧಪೂಜೆ, ದೀಪಾವಳಿ ಹಬ್ಬಗಳ ಕಾರಣಗಳಿಂದ ಪಟ್ಟಣದಲ್ಲಿ ಕಸದ ರಾಶಿ ಹೆಚ್ಚಾಗಿದೆ. ಕೆಲವು ವಾರ್ಡುಗಳಲ್ಲಿ ಕೊಳಚೆ ನೀರು ಚರಂಡಿಯಲ್ಲಿ ಹರಿಯಲು ಮಾರ್ಗವಿಲ್ಲದೆ ರಸ್ತೆಯಲ್ಲಿ ಶೇಖರಣೆ ಆಗಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ವಿವೇಕಾನಂದನಗರದಲ್ಲಿ ವಾರ್ಡಿನ ಸದಸ್ಯೆ ವೇದಾವತಿ ಪ್ರಭಾಕರ್ ಅವರ ಮನೆ ಮುಂದೆಯೇ ಕಸದ ರಾಶಿ ತುಂಬಿ ನಾಗರಿಕರಿಗೆ ಕಿರಿಕಿರಿ ಉಂಟಾಗುತ್ತಿದ್ದರೂ ಸದಸ್ಯೆ ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಪುರಸಭೆಯಲ್ಲಿ ಆಡಳಿತ ಮಂಡಳಿ ಇಲ್ಲದ ಕಾರಣ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿಯೂ ವಿಫಲರಾಗಿದ್ದಾರೆ, ಕಂಟೈನರ್ ಅಗತ್ಯವಿರುವ ಕಡೆ ಅಳವಡಿಸಿಲ್ಲ. ಇದು ಎಲ್ಲಾ ವಾರ್ಡುಗಳಲ್ಲಿಯೂ ಇರುವ ಸಾಮಾನ್ಯ ಸಮಸ್ಯೆಯಾಗಿದೆ. ಕಸ ವಿಲೇವಾರಿಗೆ ಜನತೆಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೈಗೊಳ್ಳುವ ಮೂಲಕ ಕಸದಿಂದ ಪಟ್ಟಣವನ್ನು ಕಲುಷಿತವಾಗಿರುವುದನ್ನು ತಪ್ಪಿಸಬೇಕಾಗಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಸೆಯಾಗಿದೆ.