ಅಂಡರ್ ಪಾಸ್ ರಸ್ತೆಗಳ ಫಜೀತಿ; ಜನರ ಪರದಾಟ
ಎನ್. ಬಾಬು
ಚಿಂತಾಮಣಿ: ತಾಲೂಕಿನ ವಿವಿಧ ಮಾರ್ಗಗಳಲ್ಲಿ ರೈಲ್ವೆ ಅಂಡರ್ ಪಾಸ್ ಕಾಮಗಾರಿಗಳು ಕಳಪೆಯಿಂದ ಕೆಲಸ ಮಾಡಿದ ಪರಿಣಾಮ ಈ ಮಾರ್ಗವಾಗಿ ಸಂಚರಿಸುವ ರೈತ, ವಿದ್ಯಾರ್ಥಿಗಳಿಗೆ ಮಳೆ ನೀರು ನಿಂತ ಪರಿಣಾಮ ಸಂಚರಿಸಲು ತೊಂದರೆಯಾಗುತ್ತಿದ್ದರೂ ರೈಲ್ವೆ ಅಧಿಕಾರಿಗಳಾಗಲಿ ಅಥವಾ ಗುತ್ತಿಗೆದಾರರಾಗಲಿ ಕ್ರಮ ಕೈಗೊಳ್ಳುವಲ್ಲಿ ವಿಫಲಗೊಂಡಿದ್ದಾರಂದು ಸಾರ್ವಜನಿಕರು ಆರೋಪಿಸಿದ್ದಾರೆ. ಚಿಂತಾಮಣಿ-ಬುಕ್ಕನಹಳ್ಳಿ, ತಿಮ್ಮಸಂದ್ರ ಮಾರ್ಗದ ರೈಲ್ವೆ ಅಂಡರ್ ಪಾಸ್ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದ್ದು, ನೀರು ಸರಾಗವಾಗಿ ಹರಿಯದೆ ಸಾರ್ವಜನಿಕರಿಗೆ ತೊಂದರೆಯಾಗಿದೆ. ಸಮಸ್ಯೆ ಬಗ್ಗೆ ರೈಲ್ವೆ ಅಧಿಕಾರಿಗಳಗೆ, ಗುತ್ತಿಗೆದಾರರಿಗೆ ಹಲವು ಬಾರಿ ಮನವಿ ನೀಡಿದ್ದರೂ ನಿರ್ಲಕ್ಷ್ಯವಹಿ,ದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಉಪ್ಪರಪೇಟೆ ಮುಖಾಂತರ ರಾಯಪ್ಪಲ್ಲಿ ಹಾಗೂ ಬಿಂಗಾನಹಳ್ಳಿ ಗ್ರಾಮಗಳಿಗೆ ಹೋಗಿ ಬರಲು ರೈಲ್ವೆ ಇಲಾಖೆ ಅಂಡರ್ ಪಾಸ್ ಮಾರ್ಗ ಅನುಸರಿಸುತ್ತಿದ್ದು, ಇಲ್ಲಿನ ಅಂಡರ್ ಪಾಸ್ ರಸ್ತೆ ಕಾಮಗಾರಿ ರೈಲು ಓಡಾಡುವುದಕ್ಕೂ ಮುನ್ನವೇ ಶಿಥಿಲಗೊಂಡಿದೆ.
ಮಾಡಿಕೆರೆ ಅಂಡರ್ ಪಾಸ್: ತಾಲೂಕಿನ ಮಾಡಿಕೆರಿ ಕ್ರಾಸ್ ಮಾರ್ಗವಾಗಿ ಮದನಪಲ್ಲಿಗೆ ಹೋಗುವ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಮೇಲ್ನೋಟಕ್ಕೆ ಮುಗಿದಿದೆಯೆಂದು ಹೇಳುವ ಗುತ್ತಿಗೆದಾರ ಡಾಂಬರು ಹಾಕಿದ ಎರಡೇ ತಿಂಗಳಲ್ಲಿ ಕಿತ್ತು ಹೋಗಿರುವುದರಿಂದ ಈ ಮಾರ್ಗವಾಗಿ ಸಂಚರಿಸುವ ಸಾರ್ವಜನಿಕರಿಗೆ ಕಿರಿ ಕಿರಿ ಉಂಟಾಗುತ್ತಿದ್ದರೂ ಇತ್ತ ಗಮನ ಹರಿಸದ ಅಧಿಕಾರಿಗಳ ಕಾರ್ಯವೈಕರಿ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೇಳೂರು ರಸ್ತೆಯ ಅಂಡರ್ ಪಾಸ್: ಪಟ್ಟಣದ ಚೇಳೂರು ರಸ್ತೆಯ ರೈಲ್ವೆ ಅಂಡರ್ ಪಾಸ್ ಬಳಿಯ ಚರಂಡಿ ಕಾಮಗಾರಿ ಕಳಪೆಯಿಂದ ಕೂಡಿದ ಪರಿಣಾಮ ಮಳೆ ಬಿದ್ದಾಗ ನೀರು ಸರಾಗವಾಗಿ ಹರಿಯದೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಚಿಂತಾಮಣಿ ನಗರಕ್ಕೆ ಹೋಗಿಬರುವ ಒಂದೇ ಮಾರ್ಗವಾದ ರೈಲ್ವೆ ಅಂಡರ್ ಪಾಸ್ ಮಳೆ ಬಿದ್ದ ಸಂದರ್ಭದಲ್ಲಿ ಸಂಚರಿಸಕ್ಕಾಗದೆ ಜನರು ಸಂಕಷ್ಟಕ್ಕೀಡಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನವಾಗಿರುವ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.