ಕಾನೂನು ಅರಿವು ನೆರವು ಕಾರ್ಯಕ್ರಮ
ಶಿಡ್ಲಘಟ್ಟ: ಕಾನೂನು ಸೇವೆಗಳ ಪ್ರಾದಿಕಾರ ಜಾರಿಗೆ ಬಂದು 18 ವರ್ಷಗಳಾಗಿದ್ದು, ಮಹತ್ವದ ಕಾನೂನಾಗಿದೆ ಎಂದು ಪ್ರಧಾನ ಸಿವಿಲ್ನ್ಯಾಯಾದೀಶ ಎಸ್. ಮಹೇಶ್ ಹೇಳಿದರು. ದ್ಯಾವಪ್ಪನ ಗುಡಿಯಲ್ಲಿ ಶಾಲಾ ಮಕ್ಕಳಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾನೂನನ್ನು ಕಾಪಾಡುವವರನ್ನು ಕಾನೂನು ಸದಾ ಕಾಪಾಡವುದಾಗಿ ಹೇಳಿದರು. ಹೆಚ್ಚುವರಿ ಸಿವಿಲ್ನ್ಯಾಯಾಧೀಶ ವಿಜಯ ದೇವರಾಜ ಅರಸ್ ಮಾತನಾಡಿ, ಪ್ರಸ್ತುತ ಭಾರತ ದೇಶದಲ್ಲಿ 10,000 ದಿಂದ 15,000 ಕಾನೂನುಗಳಿದ್ದು, ಪ್ರತಿವರ್ಷ ಕೆಲವು ಕಾನೂನುಗಳು ಸೇರುತ್ತಿದ್ದು ಕೆಲವು ಬಿಟ್ಟು ಹೋಗುತ್ತಿವೆ. ಎಲ್ಲರೂ ಜನನ ಪ್ರಮಾಣ ಪತ್ರನವನು ಪಡೆಯಬೇಕೆಂದು ತಿಳಿಸಿದರು. ವಕೀಲ ಯೋಗಾನಂದ್ ಮಾಹಿತಿ ಹಕ್ಕು ಅದಿನಿಯಮ 2005 ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಜನನ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ತಹಸಿಲ್ದಾರ್ ನಾರಾಯಣಸ್ವಾಮಿ, ರಘುನಾಥ ರೆಡ್ಡಿ, ಈ.ಡಿ. ಶ್ರೀನಿವಾಸ್, ಪ್ರಾಂಶುಪಾಲ ನಾಗರತ್ನಮ್ಮ, ಕೃಷ್ಣ, ಮಂಜುಳ, ಕಲ್ಪನಾ ಇದ್ದರು.
ಕನ್ನಡ ರಾಜ್ಯೋತ್ಸವ
ಶಿಡ್ಲಘಟ್ಟ: ಕನ್ನಡ ಕ್ರಿಯಾ ಸಮಿತಿ, ಕನ್ನಡ ಸೇನೆ ವತಿಯಿಂದ 58ನೇ ಕನ್ನಡ ರಾಜ್ಯೋತ್ಸವವನ್ನು 11ರಂದು ಕೋಟೆ ವೃತ್ತದ ಬಳಿ ಹಮ್ಮಿಕೊಳ್ಳಲಾಗಿದ್ದು, ಕನ್ನಡಾಭಿಮಾನಿಗಳು ಭಾಗವಹಿಸಿ ಯಶ್ವಸಿಗೊಳಿಸಬೇಕಾಗಿ ತಿಳಿಸಿದ್ದಾರೆ. ತಾಯಿ ಭುವನೇಶ್ವರಿ ಮೆರವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಸಾಗುತ್ತದೆ. ಕನ್ನಡ ರಾಜ್ಯೋತ್ಸವದ ಆಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರೈತ ಸಂಘದ ಪ್ರತಿಭಟನೆ
ಮಾಲೂರು: ನ್ಯಾಯ ಕೇಳಲು ಹೋದ ರೈತ ಮುಖಂಡರಿಗೆ ಬೆದರಿಕೆ ಹಾಕಿದ ಜಿಪಂ ಉಪ ಕಾರ್ಯದರ್ಶಿ ಬದನೂರು ಹಾಗೂ ಜಿಲ್ಲಾ ಸಮಾಜ ಕಲ್ಯಾಣಅಧಿಕಾರಿ ಎಸ್.ಪಿ. ಗುರುಮೂರ್ತಿ ಅವರನ್ನು ಅಮಾನತ್ತು ಮಾಡಬೇಕೆಂದು ತಾಲೂಕು ರೈತ ಸಂಘ ಶುಕ್ರವಾರ ಪಟ್ಟಣದ ಮಿನಿವಿಧಾನ ಸೌಧದ ಮುಂಭಾಗ ಪ್ರತಿಭಟನೆ ನಡೆಸಿತು. ತಾಲೂಕು ಅಧ್ಯಕ್ಷ ಮಾಸ್ತಿ ಬಾಬು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ರೈತ ಸಂಘದ ಸಂಚಾಲಕ ನಾರಾಯಣಗೌಡ, ವಿದ್ಯಾರ್ಥಿ ನಿಲಯದ ಅಕ್ರಮಗಳ ಬಗ್ಗೆ ನ್ಯಾಯ ಕೇಳಲು ಹೋಗಿದ್ದ ಸಂಘಟನೆಯ ಜಿಲ್ಲಾಧ್ಯಕ್ಷ ಹೂವಳ್ಳಿ ನಾಗರಾಜ್ರನ್ನು ನಿಂದಿಸಿರುವುದು ಖಂಡನೀಯ. ಇಂತಹ ಅಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವುದರಿಂದ ಕೊಡಲೇ ಇಬ್ಬರು ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕೆಂದು ಅಗ್ರಹಿಸಿ ತಹಸೀಲ್ದಾರ್ ಡಾ. ಸುಧಾ ಅವರಿಗೆ ಮನವಿ ಅರ್ಪಿಸಿದರು.
ಸಮಾಜ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿ
ಕೋಲಾರ: ಶಿಕ್ಷಕರು ಸಮಾಜ ಮೆಚ್ಚುವ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದಾಗ ಮಕ್ಕಳನ್ನು ರಾಷ್ಟ್ರದ ಸತ್ಪ್ರಜೆಗಳನ್ನಾಗಿ ತಯಾರು ಮಾಡಲು ಸಾಧ್ಯವಾಗುತ್ತದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಗದೀಶ್ ತಿಳಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಸಮಿತಿಯಿಂದ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹೊಸದಾಗಿ ಬಿಇಒ ಆಗಿ ಅಧಿಕಾರ ಸ್ವೀಕರಿಸಿರುವ ತಾವು ತಾಲೂಕಿನ ಎಲ್ಲಾ ಶಿಕ್ಷಕರ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸಲು ಬದ್ಧನಾಗಿರುವುದಾಗಿ ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನೌಕರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಶಿಕ್ಷಕರು ಶಿಸ್ತಿನ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ದೂರುಗಳ ಬಗ್ಗೆ ಕೂಲಂಕುಶ ಪರಿಶೀಲನೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳುವ ಮೂಲಕ ಉತ್ತಮ ವಾತಾವರಣ ನಿರ್ಮಾಣಕ್ಕೆ ನೆರವು ನೀಡಬೇಕು ಎಂದರು. ವೆಂಕಟಶಿವಪ್ಪ, ನಾಗರಾಜ್, ಶ್ರೀನಿವಾಸಮೂರ್ತಿ, ಸೋಮಶೇಖರ್ ಮಾತನಾಡಿದರು. ಅಶೋಕ, ರಂಗಯ್ಯ, ಆರ್. ಶ್ರೀನಿವಾಸನ್, ಶೇಖ್ ಪಯಾಜುದ್ದೀನ್, ಕೆ.ಎಚ್. ಸಂಪತ್ ಕುಮಾರ್, ರುದ್ರಪ್ಪ, ರಾಮಚಂದ್ರಪ್ಪ, ಕೆ.ಟಿ.ನಾಗರಾಜ್ ಇದ್ದರು.