ಖಾಸಗಿ ನಿವೇಶನದಲ್ಲಿ ಕಸದ ರಾಶಿ
ಕೋಲಾರದಲ್ಲಿ ಪ್ರತಿನಿತ್ಯ ಸಂಗ್ರಹಣೆ ಆಗುವ ಕಸವನ್ನು ವಿಲೇವಾರಿ ಮಾಡಲು ಸೂಕ್ತವಾದ ಜಾಗವಿಲ್ಲದ ಕಾರಣ ಸಾರ್ವಜನಿಕರು ಖಾಸಗಿ ನಿವೇಶನಗಳಲ್ಲಿ ಕಸವನ್ನು ಎಸೆಯುವ ಮೂಲಕ ಪರಿಸರ ಇನ್ನಷ್ಟು ಕಲುಷಿತಗೊಳಿಸುತ್ತಿದ್ದಾರೆ. ನಗರಸಭೆಯವರು ಘನತ್ಯಾಜ್ಯ ವಿಲೇವಾರಿಗಾಗಿ ಕಳೆದ ಹತ್ತಾರು ವರ್ಷಗಳಿಂದ ಜಾಗ ಹುಡುಕುತ್ತಿದ್ದರೂ ಪಟ್ಟಭದ್ರ ಹಿತಾಸಕ್ತಿಗಳು ಜಮೀನು ಸಿಗದಂತೆ ಷಡ್ಯಂತ್ರ ಮಾಡುತ್ತಿರುವುದರಿಂದ ನಗರದಲ್ಲಿ ಪ್ರತಿದಿನ ಸಂಗ್ರಹಣೆ ಆಗುವ ನೂರಾರು ಟನ್ ಕಸವನ್ನು ನಗರಸಭೆ ಸಿಬ್ಬಂದಿ ಖಾಸಗಿ ನಿವೇಶನ, ಸಾರ್ವಜನಿಕ ಸ್ಥಳಗಳಲ್ಲಿ ಸುರಿಯುತ್ತಿರುವುದರಿಂದ ಊರಿನ ಸೌಂದರ್ಯ ಹಾಳಾಗುತ್ತಿರುವುದಲ್ಲದೆ, ಸಾಂಕ್ರಾಮಿಕ ರೋಗಕ್ಕೆ ಪುಕ್ಕಟೆ ಆಹ್ವಾನ ನೀಡಿದಂತಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಘನತ್ಯಾಜ್ಯ ವಿಲೇವಾರಿಗೆ ಜಮೀನು ಪತ್ತೆ ಮಾಡಿ ಜನರ ಆರೋಗ್ಯ ಕಾಪಾಡಬೇಕು. ಸುಪ್ರೀಂ ಕೋರ್ಟಿನ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಉದಾಸೀನ ಮಾಡುತ್ತಿರುವ ನಗರಸಭೆಯ ವಿರುದ್ಧ ಕಾನೂನು ಉಲ್ಲಂಘನೆ ಆರೋಪದ ಮೇಲೆ ನ್ಯಾಯಾಲಯದಲ್ಲಿ ಯಾರಾದರೂ ಅರ್ಜಿ ಸಲ್ಲಿಸುವ ಮುನ್ನ ಅಧಿಕಾರಿಗಳು ಎಚ್ಚರ ವಹಿಸುವುದು ಸೂಕ್ತ
ಟಿ ರಂಗನಾಥ್ ಪಿಸಿ ಬಡಾವಣೆ, ಕೋಲಾರ.
ಸೊಳ್ಳೆ ಕಾಟದಿಂದ ಮುಕ್ತಿ ದೊರಕಿಸಿ
ಕೋಲಾರ ನಗರದ ಹಳೆ ಬಡಾವಣೆಯಲ್ಲಿ ಚರಂಡಿಗಳು ದುರಸ್ತಿ ಆಗದಿರುವುದರಿಂದ ಕೊಳಚೆ ನೀರು ನಿಂತಲ್ಲೇ ನಿಂತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸಂಜೆ ವೇಳೆ ಸೊಳ್ಳೆಗಳ ಸಂಗೀತ, ದುರ್ವಾಸನೆಯಿಂದ ಜನತೆಯ ನೆಮ್ಮದಿಗೆ ಭಂಗ ಉಂಟಾಗಿದೆ. ಸೊಳ್ಳೆಗಳ ಹವಾಳಿಯಿಂದ ಡೆಂಗ್ಯೂ, ಚಿಕೂನ್ ಗುನ್ಯಾ ಮತ್ತಿತ್ತರ ಕಾಯಿಲೆಗಳು ಹರಡುವ ಸಾಧ್ಯತೆಗಳು ಇರುವುದರಿಂದ ನಗರಸಭೆ ಅಧಿಕಾರಿಗಳು ಕೂಡಲೇ ಚರಂಡಿಗಳ ಸ್ವಚ್ಛತೆಯ ಜೊತೆಗೆ ದುರಸ್ತಿ ಕಾಮಗಾರಿಗೆ ಕ್ರಮ ಜರುಗಿಸಬೇಕು. ಇದೇ ಬಡಾವಣೆಯಲ್ಲಿ ಕೆಲ ಗಲ್ಲಿಗಳಲ್ಲಿ ಚರಂಡಿ ದುರಸ್ತಿಗಾಗಿ ಚಪ್ಪಡಿ ಕಲ್ಲುಗಳನ್ನು ಕಿತ್ತು ಹಾಕಲಾಗಿದೆ. ಇದರಿಂದ ಜನತೆ ಓಡಾಡುವುದಕ್ಕೆ ಕಷ್ಟವಾಗುತ್ತದೆ. ಮಳೆ ನಿಂತಿರುವುದರಿಂದ ಚರಂಡಿ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಂಡು ಜನತೆಯ ನೆಮ್ಮದಿ ಕಾಪಾಡಿ.
ಟಿ ವೃಥ್ವಿರಾಜ್, ಡೂಮ್ ಲೈಟ್ ಸರ್ಕಲ್, ಕೋಲಾರ.