ನಾಳೆಯಿಂದ ಪೈಕಾ ಕ್ರೀಡಾಕೂಟ ಆರಂಭ
ಕೋಲಾರ: ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಪೈಕಾ ಮಿಷನ್ ಸಂಯುಕ್ತಾಶ್ರಯದಲ್ಲಿ ಬಾಲಕ-ಬಾಲಕಿಯರ ವಿಭಾಗದಲ್ಲಿ ಪೈಕಾ ಗ್ರಾಮೀಣ ಕ್ರೀಡಾಕೂಟಗಳನ್ನು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 6 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
ತಾಲೂಕು ಮಟ್ಟದ ಕ್ರೀಡಾಕೂಟ ನ.12 ರಂದು ಬಂಗಾರಪೇಟೆ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿ ಮೈದಾನದಲ್ಲಿ ನಡೆಯಲಿದೆ. ನ.13 ರಂದು ಮಾಲೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ. ನ.15 ರಂದು ಶ್ರೀನಿವಾಸಪುರ ತಾಲೂಕು ಕ್ರೀಡಾಂಗಣ. ನ.16 ರಂದು ಮುಳಬಾಗಿಲು ತಾಲೂಕಿನ ತಾಯಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಥಮಿಕ ಶಾಲೆಯ ಮೈದಾನ ಹಾಗೂ ನ.18 ಕೋಲಾರ ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣ ಕ್ರೀಡಾ ನಡೆಸಲಾಗುತ್ತದೆ.
ಜಿಲ್ಲಾ ಮಟ್ಟದಲ್ಲಿ ಕ್ರೀಡಾ ಕೂಟ ನ.21 ರಂದು ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದರಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಖೋ-ಖೋ, ಕಬಡ್ಡಿ, ಬ್ಯಾಡ್ಮಿಂಟನ್, ಟಿ.ಟಿ ಗುಂಪು ಕ್ರೀಡೆಗಳನ್ನು ಒಳಗೊಂಡಿರುತ್ತದೆ. ತಾಲೂಕು ಮಟ್ಟದ ಅಥ್ಲೆಟಿಕ್ಸ್ನಲ್ಲಿ ಬಾಲಕಿಯರಿಗೆ 100, 200, 800ಮೀ. ಓಟವನ್ನು ನಿಗದಿಪಡಿಸಲಾಗಿದೆ. ಬಾಲಕರಿಗೆ 1,500 ಹಾಗೂ 3,000 ಮೀ. ಓಟವನ್ನು ಏರ್ಪಡಿಸಲಾಗಿದೆ. ಇದಲ್ಲದೆ ಉದ್ದ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, 4 ಸುತ್ತು 100 ಮೀ. ರೀಲೆ ಓಟ, ವಾಲಿಬಾಲ್, ಖೋ-ಖೋ, ಕಬಡ್ಡಿ, ಕುಸ್ತಿ ಕ್ರೀಡೆಗಳನ್ನು ಒಳಗೊಂಡಿರುತ್ತದೆ. ತಾಲೂಕು ಮಟ್ಟದಲ್ಲಿ ಆಯ್ಕೆ ಮಾಡಿದ ಹಾಕಿ, ಬ್ಯಾಸ್ಕೆಟ್ಬಾಲ್, ಹ್ಯಾಂಡ್ ಬಾಲ್, ಶಟಲ್ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಕ್ರೀಡೆಗಳ ವಿಜೇತರನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ.
ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯ ನಿರ್ದೇಶಕರನ್ನು ಹಾಗೂ ಆಯಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ದೈಹಿಕ ಪರಿವೀಕ್ಷಕರನ್ನು ಸಂಪರ್ಕಿಸಬಹುದು.