ಬಿಜಿಎಸ್ ಶಾಲೆಯಲ್ಲಿ ಪೋಷಕರಿಗಾಗಿ ವಿವಿಧ ಸ್ಪರ್ಧೆಗಳು
ಚಿಕ್ಕಬಳ್ಳಾಪುರ: ಸಾಮಾನ್ಯವಾಗಿ ಶಾಲೆಗಳಲ್ಲಿ ತಮ್ಮ ಮಕ್ಕಳು ನಾನಾ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ನೋಡುತ್ತ ಪೋಷಕರು ಅವರನ್ನು ಹುರಿದುಂಬಿಸುವುದು ಸಹಜ. ಆದರೆ, ಇಲ್ಲಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ತಮ್ಮ ಅಪ್ಪ ಅಮ್ಮಂದಿರು ಗೆಲ್ಲಬೇಕೆಂದು ಪುಟಾಣಿ ಮಕ್ಕಳು ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹಿಸಿದರು.
ಪೋಷಕರು ಮಕ್ಕಳಾಗಿ ಭಾಗವಹಿಸಿ ಆಟಗಳಲ್ಲಿ ಪೈಪೋಟಿ ನೀಡಿ ಖುಷಿಪಟ್ಟರು. ಇಂತಹ ಅಪರೂಪ ಸ್ಪರ್ಧೆಗೆ ವೇದಿಕೆ ನಿರ್ಮಿಸಿದ್ದು ಮಾತ್ರ ಸದಾ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ತಾಲೂಕಿನ ಅಗಲಗುರ್ಕಿಯ ಬಿಜಿಎಸ್ ಶಾಲೆ.
ತಮ್ಮ ಮಕ್ಕಳನ್ನು ಓದಿಸುವ ಶಾಲೆಯೊಂದಿಗೆ ಪೋಷಕರು ಉತ್ತಮ ಬಾಂಧವ್ಯವನ್ನು ಹೊಂದಿರಬೇಕು. ಇದರಿಂದ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಸಮರ್ಪಕ ರೀತಿಯಲ್ಲಿ ಕಾಳಜಿ ವಹಿಸಲು ಸುಲಭವಾಗುತ್ತದೆ ಎಂಬ ಉದ್ದೇಶದಿಂದ ಪೋಷಕರನ್ನು ಶಾಲಾ ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತೆ ಮಾಡಲು ಶಾಲಾ ಅಡಳಿತ ಮಂಡಲಿ ಪೋಷಕರ ಕ್ರೀಡಾಕೂಟವನ್ನು ಹಮ್ಮಿಕೊಂಡಿತ್ತು.
ಆಕರ್ಷಕ ಸ್ಪರ್ಧೆಗಳು: ತಮಗಾಗಿ ತಮ್ಮ ಮಕ್ಕಳು ಓದುವ ಶಾಲೆಯವರು ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದಕ್ಕೆ ಅನುಗುಣವಾಗಿ ಸ್ಪರ್ಧೆಗಳು ವಿಶೇಷವಾಗಿ ಗಮನ ಸೆಳೆದವು. ಗಂಡಸರಿಗಾಗಿ ನಡೆದ ಸೀರೆ ಮಡಚುವ ಸ್ಪರ್ಧೆಯೂ ವಿಶೇಷವಾಗಿತ್ತು. ಕೊಟ್ಟಿರುವ ನಾನಾ ತರಹದ ಸೀರೆಗಳನ್ನು ತ್ವರಿತವಾಗಿ ಯಾರು ಮಡಚುತ್ತಾರೆಯೋ ಅವರು ವಿಜೇತರು ಎಂದು ತಿಳಿಸಿದ ಹಿನ್ನೆಲೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಪ್ಪಂದಿರು ನಾ ಮುಂದು ತಾ ಮುಂದು ಎನ್ನುವಂತೆ ಸೀರೆಗಳನ್ನು ಮಡಚಿ ಗೆಲ್ಲಲು ಮುಂದಾದರು. ಇದಲ್ಲದೇ ಗುಂಡು ಎಸೆತ, 100 ಮೀಟರ್ ಓಟದ ಸ್ಪರ್ಧೆ ಸೇರಿದಂತೆ ಇನ್ನೂ ಅನೇಕ ರೀತಿಯ ಸ್ಪರ್ಧೆಗಳನ್ನು ಪುರುಷರಿಗಾಗಿ ಹಮ್ಮಿಕೊಳ್ಳಲಾಗಿತ್ತು. ಚೇಲ್ಡ್ ಸರ್ಚಿಂಗ್ ಸ್ಪರ್ಧೆ ಆಕರ್ಷಕವಾಗಿತ್ತು. ಇದರಲ್ಲಿ ತಮ್ಮ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪೋಷಕರು ಗುಂಪಾಗಿದ್ದ ಮಕ್ಕಳಲ್ಲಿ ತಮ್ಮ ಮಕ್ಕಳನ್ನು ಹುಡುಕಬೇಕಾಗಿತ್ತು. ಈ ಸಂದರ್ಭದಲ್ಲಿ ಹಲವರು ತಮ್ಮ ಮಕ್ಕಳೆಂದು ಭಾವಿಸಿ ಬೇರೆಯವರನ್ನು ಮುಟ್ಟಲು ಹೋಗಿದ್ದೂ ನಡೆಯಿತು. ಇನ್ನೂ ಮಹಿಳೆಯರಿಗಾಗಿ ಚಮಚ-ನಿಂಬೆಹಣ್ಣು ಓಟದ ಸ್ಪರ್ಧೆ, ಮ್ಯುಸಿಕಲ್ ಚೇರ್, ರಂಗೋಲೆ ಸ್ಪರ್ಧೆ, ಬಕೆಟ್ನೊಳಗೆ ಚೆಂಡು ಎಸೆಯುವುದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಕೆಟ್ ಹೊಡೆಯುವುದು ಸೇರಿದಂತೆ ವಿವಿಧ ರೀತಿಯ ಸ್ಪರ್ಧೆಗಳನ್ನು ಕೈಗೊಳ್ಳಲಾಗಿತ್ತು. ಸಂತೋಷದಿಂದ ಭಾಗವಹಿಸಿದ್ದ ತಮ್ಮ ಅಮ್ಮ ಅಪ್ಪಂದಿರನ್ನು ಮಕ್ಕಳು ಚಪ್ಪಾಳೆ ತಟ್ಟುತ್ತ ಹುರಿದುಂಬಿಸುತ್ತಿದ್ದ ದೃಶ್ಯ ಕಂಡು ಬಂದಿದ್ದು ಗೆಲ್ಲಬೇಕೆಂಬ ಭಾವನೆಯಲ್ಲಿ ಭಾಗವಹಿಸಿದ್ದ ಹಲವರು ಪಚ್ಚುಮೋರೆ ಹಾಕಿಕೊಂಡಿದ್ದು ನಡೆಯಿತು.
ಶ್ರೀಗಳಿಂದ ಚಾಲನೆ: ಶಾಲಾ ಮಕ್ಕಳ ಪೋಷಕರ ಕ್ರೀಡಾಕೂಟಕ್ಕೆ ಅದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.
ಕ್ರೀಡೆಗಳಲ್ಲಿ ಭಾಗವಹಿಸಲು ಯಾವುದೇ ವಯಸ್ಸಿನ ಮಿತಿಯಿಲ್ಲ. ಅಲ್ಲದೇ ಕ್ರೀಡೆಗಳು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ. ಇದರಿಂದ ಪ್ರತಿಯೊಬ್ಬರು ಸೋಲು ಗೆಲುವು ಎನ್ನುವುದನ್ನು ಬದಿಗೊತ್ತಿ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ತಿಳಿಸಿದರು.
ಶಾಲಾ ಮಕ್ಕಳನ್ನು ಆಟವಾಡಲು ಬಿಡದೇ ಹೆಚ್ಚಿಗೆ ಓದು ಎಂದು ಒತ್ತಡವನ್ನು ಹೇರಲಾಗುತ್ತದೆ. ಇದರಿಂದ ಮಗುವಿನ ಮನಸ್ಸಿಗೆ ತೊಂದರೆಯಾಗಿ ಇನ್ನೂ ಒತ್ತಡದಲ್ಲಿ ವಿದ್ಯಾಭ್ಯಾಸವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಪೋಷಕರಿಗೆ ಕ್ರೀಡೆಯ ಮಹತ್ವವನ್ನು ತಿಳಿಸುವುದರ ಜತೆಗೆ ತಮ್ಮ ಮಕ್ಕಳು ಓದುವ ಶಾಲೆಯೊಂದಿಗೆ ಸಂಪರ್ಕವನ್ನಿಟ್ಟುಕೊಂಡು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಗಮನಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಶಿಕ್ಷಣ ತಜ್ಞ ಪ್ರೊ. ಶಿವರಾಮರೆಡ್ಡಿ ಇದ್ದರು.