ರಸ್ತೆ ದುರಸ್ತಿಗೆ ಮುಂದಾದ ಅಧಿಕಾರಿಗಳು
ಗುಡಿಬಂಡೆ: ರಸ್ತೆ ದುರಸ್ತಿ ಬಗ್ಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ವರದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಗುಂಡಿ ಬಿದ್ದ ರಸ್ತೆಗೆ ಮಣ್ಣು ತುಂಬಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವತ್ತ ಕಾರ್ಯೋನ್ಮುಖರಾಗಿದ್ದಾರೆ. ಪಟ್ಟಣದ ಹೊರವಲಯದ ಅಮಾನಿಬೈರಸಾಗರದ ಕೆರೆ ಏರಿ ಮೇಲಿರುವ ರಸ್ತೆ ಮೋರಿ, ಹಾಳಗಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಈ ಬಗ್ಗೆ ಪತ್ರಿಕೆ ಗುರುವಾರ ನೋಡಿ ಸ್ವಾಮಿ ಈ ರಸ್ತೆ ಇರೋದು ಹೀಗೆ ಎಂಬ ಶೀರ್ಷಿಕೆಯಡಿ ಲೇಖನ ಪ್ರಕಟಿಸಿ ಸಂಬಂಧಪಟ್ಟ ಇಲಾಖೆಯ ಗಮನ ಸೆಳೆದಿತ್ತು. ಈ ಕುರಿತು ವರದಿ ಪ್ರಕಟವಾದ ಬೆನ್ನೆಲ್ಲೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ರಸ್ತೆಯಲ್ಲಿ ಉಂಟಾಗಿದ್ದ ಗುಂಡಿಗಳನ್ನು ಮುಚ್ಚಿ ದುರಸ್ತಿಗೊಳಿಸಿದ್ದಾರೆ.