ಅರಸು ವೈದ್ಯಕೀಯ ಕಾಲೇಜು ವಿದ್ಯಾರ್ಥಿ ಕೊಲೆ ಯತ್ನ
ಕೋಲಾರ: ನಗರದ ಹೊರ ವಲಯದ ಟಮಕದಲ್ಲಿನದೇವರಾಜ ಅರಸು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬನ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ದೇವರಾಜ ಅರಸು ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಎಂಬಿಬಿಎಸ್ 9ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿರುವ ಹೈದರಾಬಾದಿನ ಮೆಹಬೂಬ್ನಗರದ ಕಾಮೇಶ್ವರ ಸಾಯಿ ಪ್ರಸಾದ್ ಅಪರಿಚಿತ ದುಷ್ಕರ್ಮಿಗಳಿಬ್ಬರ ದಾಳಿಗೆ ತುತ್ತಾಗಿ, ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಘಟನೆ ವಿವರ: ದೇವರಾಜ ಅರಸು ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿರುವ ಕಾಮೇಶ್ವರ್ ಸಾಯಿ ಪ್ರಸಾದ್ ಹಾಸ್ಟೆಲ್ ಸೌಲಭ್ಯವಿದ್ದರೂ ಕಾಲೇಜಿನ ಮುಂಭಾಗದ ಎಸ್ಪಿ ಕಚೇರಿ ಸಮೀಪದ ಖಾಸಗಿ ಕಟ್ಟಡದಲ್ಲಿ ರೂಮ್ ಒಂದನ್ನು ಬಾಡಿಗೆಗೆ ಪಡೆದು ತನ್ನ ಗೆಳೆಯನೊಂದಿಗೆ ವಾಸವಾಗಿದ್ದ.
ಮಂಗಳವಾರ ರಾತ್ರಿ ತನ್ನ ಸ್ನೇಹಿತ ವಿವೇಕ್ ಊಟಕ್ಕಾಗಿ ಹಾಸ್ಟೆಲ್ಗೆ ಹೋಗಿದ್ದಾಗ ಕಾಮೇಶ್ವರ್ ಸಾಯಿ ಪ್ರಸಾದ್ ಸುತ್ತಾಡಿಕೊಂಡು ಬರಲು ಟಮಕ ಕಡೆಗೆ ತೆರೆಳಿದ್ದಾಗ ದ್ವಿಚಕ್ರ ವಾಹನದಲ್ಲಿ ಒಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಚಿನ್ನದ ಸರ ಕಿತ್ತುಕೊಂದಾಗ ಪ್ರತಿರೋಧ ವ್ಯಕ್ತಪಡಿಸಿದ್ದಾನೆ.
ಇದರಿಂದ ಕುಪಿತರಾದ ದುಷ್ಕರ್ಮಿಗಳು ಕಾಮೇಶ್ವರ ಸಾಯಿ ಪ್ರಸಾದ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಾಕಿ ಪರಾರಿಯಾಗಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಗಾಯಾಳು ಹರ ಸಾಹಸ ಮಾಡಿ ಸಮೀಪದ ಮನೆಯೊಂದರ ಬಳಿ ಓಡಿ ಹೋಗಿ ರಕ್ಷಣೆ ಮಾಡುವಂತೆ ಕೂಗಿಕೊಂಡಿದ್ದಾನೆ. ಆ ಮನೆಯವರು ಮತ್ತು ಸಾರ್ವಜನಿಕರು ಕಾಮೇಶ್ವರ್ ಮೈಯಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿ, ತಕ್ಷಣ ಆಲ್.ಎಲ್. ಜಾಲಪ್ಪ ಆಸ್ಪತ್ರೆಯ ತುರ್ತು ವಾಹನ ಕರೆಸಿಕೊಂಡು ಆಸ್ಪತ್ರೆಗೆ ಸೇರಿಸಿದ್ದಾರೆ. ಜಾಲಪ್ಪ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ರಾತ್ರಿಯೇ ಸಾಗಿಸಲಾಗತ್ತು.
ಪ್ರಕರಣ ದಾಖಲು: ಇಬ್ಬರು ಅಪರಿಚಿತರು ಬೈಕ್ನಲ್ಲಿ ಬಂದು ಕೊರಳನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡರು. ಆಗ ಪ್ರತಿರೋಧ ವ್ಯಕ್ತಪಡಿಸಿದಾಗ ನನ್ನ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಾಕಿ ಪರಾರಿಯಾಗಿದ್ದಾರೆಂದು ಗಾಯಾಳು ಜಾಲಪ್ಪ ಆಸ್ಪತ್ರೆಯಲ್ಲಿ ಗಲ್ ಪೇಟೆ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಮೃತನ ಹೇಳಿಕೆ ಮೇರೆಗೆ ಗಲ್ ಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಗಾಯಾಳು ತಂದೆ ಲಕ್ಷ್ಮಣ್ ಶರ್ಮ ಮತ್ತು ತಾಯಿ ವಿಷಯ ತಿಳಿದು ಹೈದರಾಬಾದಿನ ಮೆಹಬೂಬ್ ನಗರದಿಂದ ರಾತ್ರಿಯೇ ಹೊರಟು ಬುಧವಾರ ಬೆಂಗಳೂರಿಗೆ ಆಗಮಿಸಿ ಮಗನನ್ನು ಉಳಿಸಿಕೊಳ್ಳಲು ಸೇಂಟ್ ಜಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಿಕವಾಗಿದ್ದು ವೈದ್ಯರು ಜೀವ ಉಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆಂದು ತಿಳಿದು ಬಂದಿದೆ.
ಮರಳು ಲಾರಿ ಡಿಕ್ಕಿ; ಪೇದೆ ಸಾವು
ಕೋಲಾರ: ಮರಳು ಲಾರಿ ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಪೇದೆ ಮೃತಪಟ್ಟಿರುವ ಘಟನೆ ನಗರದ ಹೊರ ವಲಯದ ಕೊಂಡರಾಜನಹಳ್ಳಿಯ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕೋಲಾರ ಕೃಷಿ ಉತ್ಪನ್ನ ಮಾರಾಟ ಸಮಿತಿಯಲ್ಲಿನ ಉಪ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಶಿವಕುಮಾರ್ ಮೃತ ದುರ್ದೈವಿ. ಬುಧವಾರ ಮುಂಜಾನೆ ಮುಳಬಾಗಲು ಕಡೆಯಿಂದ ಬೆಂಗಳೂರಿಗೆ ಸಾಗುತ್ತಿದ್ದ ಮರಳು ಲಾರಿ ರಸ್ತೆ ದಾಟುತ್ತಿದ್ದ ಪೇದೆ ಶಿವಕುಮಾರ್ ಮೇಲೆ ಹರಿದ ಪರಿಣಾಮ ದುರಂತ ಸಂಭವಿಸಿದೆ.
ಅಪಘಾತಕ್ಕೆ ಕಾರಣನಾದ ಲಾರಿ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ನಿವಾಸ್ ಸಪಟ್ ಹಾಗೂ ಡಿವೈಎಸ್ಪಿ ಅಶೋಕ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದಾಗ ತೀವ್ರವಾದ ಗಾಯಗಳಿಂದ ನರಳುತ್ತಿದ್ದ ಪೇದೆ ಶಿವಕುಮಾರ್ನನ್ನು ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ತನಿಖೆಗೆ ಆದೇಶ: ಮರಳು ಲಾರಿ ಚಾಲಕ ಉದ್ದೇಶಪೂರ್ವಕವಾಗಿ ಪೊಲೀಸ್ ಪೇದೆ ಮೇಲೆ ಲಾರಿ ಹರಿಸಿದ್ದಾನೆಯೇ, ಇಲ್ಲವೇ ಚಾಲಕ ಅಥವಾ ಪೇದೆಯ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರಬಹುದೇ ಎಂಬುದನ್ನು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ಜಾಲಪ್ಪ ಆಸ್ಪತ್ರೆಯ ಶವಾಗಾರದಲ್ಲಿ ಶವ ಪರೀಕ್ಷೆನಂತರ ಪೇದೆ ಶಿವಕುಮಾರ್ ಪಾರ್ಥಿವ ಶರೀರವನ್ನು ವಾರಸುದಾರರಿಗೆ ನೀಡಲಾಯಿತು. ಮೃತ ಸ್ವಗ್ರಾಮವಾದ ತಿಪ್ಪಸಂದ್ರದಲ್ಲಿ ಸಕಲ ಪೊಲೀಸ್ ಗೌವರದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.
ಯುವತಿ ಆತ್ಮಹತ್ಯೆ
ಗೌರಿಬಿದನೂರು: ಯುವತಿಯೋರ್ವಳು ಹೊಟ್ಟೆನೋವು ತಾಳಲಾರದೆ ನೇಣಿಗೆ ಶರಣಾಗಿರುವ ಘಟನೆ ಪಟ್ಟಣದ ಸದಾಶಿವ ಬಡಾವಣೆಯಲ್ಲಿ ಸಂಭವಿಸಿದೆ. ಮೃತಳನ್ನು ಅಕ್ಷತಾರೆಡ್ಡಿ(20)ಎಂದು ಗುರುತಿಸಲಾಗಿದ್ದು, ಈಕೆ ಪಟ್ಟಣದ ಎಇಎಸ್ ನ್ಯಾಷನಲ್ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ಓದುತ್ತಿದ್ದಳು ಎನ್ನಲಾಗಿದ್ದು, ಮಧ್ಯಾಹ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದು ಪುರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.