ಕಾಲುಬಾಯಿ ಜ್ವರ: ಶೀಘ್ರ ಪರಿಹಾರ ವಿತರಿಸಲು ಆಗ್ರಹ
ಕ.ಪ್ರ.ವಾರ್ತೆ , ಕೋಲಾರ , ನ.13
ಕಾಲು ಬಾಯಿ ಜ್ವರದಿಂದ ಕೋಲಾರ ಜಿಲ್ಲೆಯಲ್ಲಿ 1,700 ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 800 ಹಸುಗಳು ಸತ್ತಿವೆ. ರಾಜ್ಯ ಸರ್ಕಾರ ಪರಿಹಾರ ನೀಡುವುದಾಗಿ ಘೋಷಣೆ ಮಾಡಿ ಎರಡು ತಿಂಗಳು ಕಳೆದರೂ ಹಸುಗಳನ್ನು ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲವೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲು ಬಾಯಿ ಜ್ವರದಿಂದ ಕೋಲಾರ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧ ಕಡೆ 5 ಸಾವಿರಕ್ಕೂ ಹೆಚ್ಚು ಹಸುಗಳು ಸತ್ತಿವೆ, ಅನೇಕ ರಾಸುಗಳಿಗೆ ಕಾಲು ಬಾಯಿ ಜ್ವರ ನಿವಾರಣೆ ಆಗಿದ್ದರೂ ಹಾಲು ಉತ್ಪಾದನೆ ಆಗುವುದು ಕಷ್ಟ-ಸಾಧ್ಯ. ರಾಜ್ಯ ಸರ್ಕಾರ ಕೂಡಲೇ ತಾನು ಘೋಷಣೆ ಮಾಡಿರುವ ಪರಿಹಾರ ನೀಡಿ ಹೈನೋದ್ಯಮವನ್ನು ನಂಬಿರುವ ಜನರ ಕಷ್ಟ ನಿವಾರಣೆ ಮಾಡಬೇಕೆಂದರು.
ರಾಜ್ಯ ಸರ್ಕಾರ ಮೂರು ಹಂತದಲ್ಲಿ ಪರಿಹಾರ ನೀಡುವುದಾಗಿ ತಿಳಿಸಿದೆ. ಹಾಲು ಉತ್ಪಾಧಿತ ಹಸುಗಳಿಗೆ 25 ಸಾವಿರ, ಎತ್ತುಗಳಿಗೆ 15 ಸಾವಿರ ಹಾಗೂ ಕರುಗಳಿಗೆ 10 ಸಾವಿರ ರು. ತೀರ್ಮಾನಿಸಿದ್ದರು ಇದುವರೆವಿಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.
ಸರ್ಕಾರ 25 ಸಾವಿರ ಪರಿಹಾರ ನೀಡುವುದಾಗಿ ಹೇಳಿದ್ದರೂ ರೈತರಿಗೆ ಸಿಗುವುದು 16,400 ರು. ಮಾತ್ರ. ಉಳಿದ ಹಣವನ್ನು ಕರ್ನಾಟಕ ಹಾಲು ಮಹಾ ಮಂಡಳಿ ಮತ್ತು ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ ಕೊಡಿಸಲು ನಿರ್ಧರಿದೆ. ಆದರೆ, ರೀತಿಯ ಕ್ರಮದಿಂದ ರೈತರಿಗೆ ಹಣ ಸೇರುವುದು ವಿಳಂಬವಾಗುವುದರಿಂದ ಸರ್ಕಾರ ಹಾಲು ಒಕ್ಕೂಟಗಳಿಂದ ಮತ್ತು ಕೆಎಂಎಫಫ್ನಿಂದ ಹಣ ಪಡೆದು ಒಂದೇ ಕಂತ್ತಿನಲ್ಲಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಕೇಂದ್ರ ಸಚಿವರ ಭರವಸೆ: ಕೇಂದ್ರ ಸರ್ಕಾರದ ಕೃಷಿ ಸಚಿವ ಶರದ್ ಪವಾರ್ ಅವರು ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೇಂದ್ರದಿಂದ 25 ಸಾವಿರ ರು. ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರ ಮೇಲೆ ಒತ್ತಡ ತಂದು ಒಟ್ಟು 50 ಸಾವಿರ ರು.ಗಳನ್ನು ಹಸು ಕಳೆದುಕೊಂಡಿರುವ ಜನರಿಗೆ ನೀಡಬೇಕೆಂದು ತಿಳಿಸಿದರು. ದುಂಡು ಮೇಜಿನ ಸಭೆ: ರಾಜ್ಯ ಸರ್ಕಾರ ವಿಧಾನಮಂಡಲದ ಅಧಿವೇಶನಕ್ಕೆ ಮುನ್ನ ಪರಿಹಾರ ನೀಡಬೇಕು. ಒಂದು ವೇಳೆ ಸರ್ಕಾರ ವಿಫಲವಾದಲ್ಲಿ ಇದೇ ತಿಂಗಳ 21ರಂದು ದುಂಡುಮೇಜಿನ ಸಭೆಯನ್ನು ಕೋಲಾರದಲ್ಲಿ ಹಮ್ಮಿಕೊಂಡು ಜನತೆಯಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.
ಕಾಲು ಬಾಯಿ ಜ್ವರದ ಬಗ್ಗೆ ಚರ್ಚಿಸಲು ಕರೆಯಲಾಗುತ್ತಿರುವ ದಂಡು ಮೇಜಿನ ಸಭೆಗೆ ಜಿಲ್ಲೆಯ ಎಲ್ಲಾ ಶಾಸಕರು ಪಕ್ಷಾತೀತವಾಗಿ ಭಾಗವಹಿಸಿ ರೈತರ ಹಿತ ಕಾಪಾಡಬೇಕು. ಪಶುಸಂಗೋಪಾನ ಇಲಾಖೆ ಅಧಿಕಾರಿಗಳು ಹಾಗೂ ಹಾಲು ಒಕ್ಕೂಟದ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಲಾಗುತ್ತಿದೆ. ತಜ್ಞರು ರೈತರ ಸಮಸ್ಯೆಗೆ ಪರಿಹಾರ ಸೂಚಿಸಲಿದ್ದಾರೆಂದರು.
ಕಾಲುಬಾಯಿ ಜ್ವರವನ್ನು ನಿವಾರಣೆ ಮಾಡಲು ಸರ್ಕಾರದಲ್ಲಿ ಸಾಕಷ್ಟು ಹಣ ಮತ್ತು ಔಷದಿಗಳು ಇದ್ದರು ಸಹ ಪಶುಸಂಗೋಪಾನ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಕಾಲು ಬಾಯಿ ಜ್ವರಕ್ಕೆ ಶಾಶ್ವತ ಪರಿಹಾರ ದೊರಕಿಸದಿದ್ದರೆ ಹಾಲು ಉತ್ಪಾದನೆಯ ಮೇಲೆ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೆಪಿಆರ್ಎಸ್ ಜಿಲ್ಲಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಂ. ವೆಂಕಟೇಶ್, ಕೋಲಾರ ತಾಲೂಕು ಅಧ್ಯಕ್ಷ ಕುರ್ಕಿ ದೇವರಾಜ್ ಇದ್ದರು.