ರೇಷ್ಮೆ ರೀಲರ್ಸ್ಗೆ ಸಾಲ ಸೌಲಭ್ಯ: ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ
ಶಿಡ್ಲಘಟ್ಟ: ಅವಿಭಜಿತ ಕೋಲಾರ ಜಿಲ್ಲೆಯ ರೇಷ್ಮೆ ನೂಲು ಬಿಚ್ಚುವವರರಿಗೆ ಮಾಜಿ ಸಚಿವ ವಿ. ಮುನಿಯಪ್ಪನವರ ಶಿಫಾರಸ್ಸಿನಂತೆ ಸಾಲಸೌಲಭ್ಯ ಕಲ್ಪಿಸಲಾಗುವುದೆಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಮಾಜಿ ಸಚಿವ ವಿ. ಮುನಿಯಪ್ಪ ನೇತೃತ್ವದಲ್ಲಿ ನಡೆದ ಮತದಾರರಿಗೆ ಕೃತಜ್ಞತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಉಬಯ ಜಿಲ್ಲೆಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೀಲರ್ಸ್ಗಳಿಗೆ ಆರ್ಥಿಕವಾಗಿ ಸಹಾಯ ಮಾಡುವ ಉದ್ದೇಶದಿಂದ ಸಾಲಸೌಲಭ್ಯ ಯೋಜನೆ ರೂಪಿಸಲಾಗಿದ್ದು, ಕ್ಷೇತ್ರದಲ್ಲಿ ಮಾಜಿ ಸಚಿವ ವಿ. ಮುನಿಯಪ್ಪನವರು ಶಿಫಾರಸ್ಸು ಮಾಡುವ ಎಲ್ಲಾ ರೇಷ್ಮೆ ನೂಲು ರೀಲರ್ಸ್ಗೆ ಸಾಲಸೌಲಭ್ಯ ಕಲ್ಪಿಸಲಾಗುವುದೆಂದು ಭರವಸೆ ನೀಡಿದರು.
ಮಾಜಿ ಸಚಿವ ವಿ. ಮುನಿಯಪ್ಪನವರ ಶಿಫಾರಸ್ಸಿನಂತೆ ದೇವನಹಳ್ಳಿ-ವಿಜಯಪುರ-ತಲಕಾಯಲಬೆಟ್ಟ ಮಾರ್ಗವಾಗಿ ಕದಿರಿವರೆಗೆ, ಕೆ.ಜಿ.ಎಫ್, ಬಂಗಾರಪೇಟೆರ, ಸಾದಲಿ ಬಾಗೇಪಲ್ಲಿವರೆಗೆ ಹಾಗೂ ಕೋಲಾರನಿಂದ ಸೋಮಪುರದವರೆಗೆ ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಬೇಕೆಂಬ ಪ್ರಸ್ತಾವನೆಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಸಚಿವ ಆಸ್ಕರ್ ಫರ್ನಾಂಡೀಸ್ ಅವರೊಂದಿಗೆ ಚರ್ಚಿಸಲಾಗುವುದೆಂದರು.
ಸನ್ಮಾನ ಸ್ವೀಕರಿಸಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಸರ್ಕಾರ ಮತ್ತು ಜನರ ನಡುವೆ ಕಾಂಗ್ರೆಸ್ ಕಾರ್ಯಕರ್ತರು ಸೇತುವೆಯಾಗಿ ಕಾರ್ಯನಿರ್ವಹಿಸಿದಾಗ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವೆಂದರು. ಮಾಜಿ ಸಚಿವ ವಿ. ಮುನಿಯಪ್ಪ ಮಾತನಾಡಿದರು. ಉಸ್ತುವಾರಿ ಸಚಿವ ದಿನೇಶ್ಗುಂಡೂರಾವ್ ಅವರಿಗೆ ಮಾಜಿ ಸಚಿವ ವಿ. ಮುನಿಯಪ್ಪ ಸನ್ಮಾಸಿದರು. ಪಟ್ಟಣದ ಅಝೀಂ ಅಲೀಷಾ ಚಿಷಿ ಪಂಗಡದ ಧರ್ಮಗುರುಗಳಾದ ಅಸ್ಲಂಷಾಸಾಬ್ ನೇತೃತ್ವದಲ್ಲಿ ಸಮಾಜದ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಮಾಜಿ ಸಚಿವ ವಿ. ಮುನಿಯಪ್ಪ ಅವರನ್ನು ಸನ್ಮಾನಿಸಿದರು. ಕೋಚಿಮುಲ್ ಅಧ್ಯಕ್ಷ ಕೆ. ಗುಡಿಯಪ್ಪ, ಮುನಿಕೃಷ್ಣಪ್ಪ, ವಿ. ಸುಭ್ರಮಣಿ, ಎಸ್.ಎಂ. ನಾರಾಯಣಸ್ವಾಮಿ, ಕಂಬದಹಳ್ಳಿ ಸತೀಶ್ ಇದ್ದರು.