ಅಪ್ರಾಪ್ತ ಬಾಲಕಿ ಪ್ರಾಣ ರಕ್ಷಿಸಿದ ಸಾರ್ವಜನಿಕರು
ಕೋಲಾರ/ಚಿಂತಾಮಣಿ: ಚಿಂತಾಮಣಿ ತಾಲೂಕಿನ ಗೋಪಸಂದ್ರದಲ್ಲಿ ಸಾವು-ಬದುಕಿನ ನಡುವೆ ಸೆಣಸಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಜೀವ ರಕ್ಷಣೆ ಮಾಡಿ ಕೋಲಾರ ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಗೆ ಸೇರಿಸಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಪೊಲಿಯೋದಿಂದ ಅಂಗವಿಕಲತೆಗೆ ತುತ್ತಾಗಿರುವ ಅನಾಮಧೇಯ ಬಾಲಕಿಯನ್ನು ಯಾರೋ ಕೊಲೆ ಮಾಡುವ ಉದ್ದೇಶದಿಂದ ಬಾಲಕಿಯ ಕೊರಳಿಗೆ ನೇಣು ಬಿಗಿದು ಚಿಂತಾಮಣಿ ತಾಲೂಕಿನ ಗೋಪಸಂದ್ರದ ಮಾವಿನ ತೋಪಿನಲ್ಲಿ ಎಸೆದಿದ್ದಾರೆ. ಬಾಲಕಿಯ ಆಕ್ರಂದನ ಕೇಳಿ ದಾರಿ ಹೋಕರು ಬಾಲಕಿಯ ಬಳಿಗೆ ಬಂದು ತಕ್ಷಣ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಮಕ್ಕಳ ತಜ್ಞರು ಇಲ್ಲದೆ ಕೋಲಾರ ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿದ್ದಾರೆ.
ಮಕ್ಕಳ ತಜ್ಞರಾದ ಡಾ.ಮುರಳಿ ಮೋಹನ್, ಡಾ. ಶಿವಣ್ಣ ಮಗುವನ್ನು ಚಿಕಿತ್ಸೆಗೆ ಒಳಪಡಿಸಿ ಬಾಲಕಿಯನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಮತ್ತೊಬ್ಬ ಮಕ್ಕಳ ತಜ್ಞ ಡಾ. ಬೈರಪ್ಪರೆಡ್ಡಿ ಸಹ ನಿಗಾ ವಹಿಸಿದ್ದಾರೆ.
ಮಾತನಾಡಲು ಬಾರದ ಅಪ್ರಾಪ್ತ ವಯಸ್ಸಿನ ಬಾಲಕಿಯ ತಂದೆ-ತಾಯಿ ಯಾರೆಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಆಸ್ಪತ್ರೆಯ ರಕ್ತ ನಿಧಿ ವಿಭಾಗದ ಸಿಬ್ಬಂದಿ ನಂದೀಶ್ ಮತ್ತು ಡಾ. ಶಿವಣ್ಣನವರು ಮಗುವಿಗೆ ಒಂದು ಜೊತೆ ಹೊಸ ಉಡುಪು ಖರೀದಿಸಿಕೊಟ್ಟಿರುವುದಲ್ಲದೆ ಸೂಕ್ತ ರಕ್ಷಣೆ ಒದಗಿಸುವಂತೆ ಜಿಲ್ಲಾ ಸರ್ಜನ್ ಡಾ. ರಮೇಶ್ ಬಾಬು ಅವರಲ್ಲಿ ಮನವಿ ಮಾಡಿದ್ದಾರೆ. ಪ್ರಕರಣ ಮೊದಲು ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ದಾಖಲು ಆಗಿದ್ದು ಬಾಲಕಿಯ ವಾರಸುದಾರರಿಗಾಗಿ ಶೋಧನೆ ಕೈಗೊಂಡಿದ್ದಾರೆ.