'ಅಪ್ರಾಪ್ತ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಅಪರಾಧ'
ಗುಡಿಬಂಡೆ: ನಮ್ಮ ದೇಶದ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆಯನ್ನು ಹೊರುವ ಮಕ್ಕಳನ್ನು ಯಾವುದೇ ರೀತಿಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ಪ.ಪಂ. ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ ತಿಳಿಸಿದರು.
ಪಟ್ಟಣದಲ್ಲಿನ ಹೊಟೇಲ್, ಗ್ಯಾರೇಜ್, ಮರಗೆಲಸ ಸೇರಿದಂತೆ ಹಲವಾರು ಅಂಗಡಿಗಳಲ್ಲಿ ಬಾಲ ಕಾರ್ಮಿಕರ ಪತ್ತೆ ಕಾರ್ಯ ಪ.ಪಂ. ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಬಾಲ ಕಾರ್ಮಿಕ ಪದ್ಧತಿ ನಿಷೇಧಕ್ಕೆ ಸರ್ಕಾರ ಕಠಿಣ ಕಾನೂನು ತಂದಿದ್ದರೂ ಇಂದಿಗೂ ಸಹ ಅನೇಕರು ಬಾಲ ಕಾರ್ಮಿಕರಾಗಿ ಅನೇಕ ಕಸುಬುಗಳಲ್ಲಿ ತೊಡಗಿದ್ದಾರೆ. ಈ ನಿಟ್ಟಿನಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪೋಷಕರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಕೈಜೋಡಿಸಬೇಕೆಂದರು.
ನಂತರ ಮಾತನಾಡಿದ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಯೋಜನಾಧಿಕಾರಿ ಬಿ.ಆರ್. ರಮೇಶ್ ಬಾಲ್ಯವಿವಾಹ, ವರದಕ್ಷಿಣೆ ಕಿರುಕುಳ, ಮೂಡನಂಬಿಕೆ ಮೊದಲಾದ ಪದ್ಧತಿಗಳಂತೆ ಬಾಲ ಕಾರ್ಮಿಕ ಪದ್ದತಿಯೂ ದೇಶದ ಅನಿಷ್ಟ ಪದ್ಧತಿಗಳಲ್ಲಿ ಒಂದಾಗಿದೆ. ಬಾಲ ಕಾರ್ಮಿಕರು ಮಾನವೀಯತೆಗೆ ಒಂದು ಕಳಂಕವಾಗಿದ್ದು, 14 ವರ್ಷದೊಳಗಿನ ಮಕ್ಕಳನ್ನು ಕೆಲಸದಲ್ಲಿ ನೇಮಿಕೊಳ್ಳುವವರು ಹಾಗೂ ಕೆಲಸಕ್ಕೆ ಕಳುಹಿಸುವ ಪೋಷಕರೂ ಅಪರಾಧಿಗಳಾಗುತ್ತಾರೆ ಎಂದು ತಿಳಿಸಿದರು.
ಪ.ಪಂ. ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ ನೇತೃತ್ವದಲ್ಲಿ ನಡೆದ ಬಾಲ ಕಾರ್ಮಿಕ ಪತ್ತೆ ಕಾರ್ಯ ಪಟ್ಟಣದಲ್ಲಿನ ಸುಮಾರು 51 ಅಂಗಡಿಗಳಲ್ಲಿ ಪತ್ತೆ ಮಾಡಲಾಗಿ, ಎಲ್ಲಾ ಅಂಗಡಿ ಮಾಲೀಕರಿಗೂ ಬಾಲ ಕಾರ್ಮಿಕರನ್ನು ನೇಮಿಸಿಕೊಂಡಲ್ಲಿ ಸರ್ಕಾರದಿಂದ ವಿಧಿಸಲ್ಪಡುವ ಶಿಕ್ಷೆಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಶಂಕರಯ್ಯ, ಪ.ಪಂ.ನ ಸಿಬ್ಬಂದಿ ಮುನಿಕೃಷ್ಣ, ಭೂಚೇತನ ಅನುವುಗಾರ ಮಂಜುನಾಥ್ ಇದ್ದರು.