ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ, ಕೋಲಾರ,ನ.15
ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಯೂನಿಕಾಸ್ ಕಾರ್ಖಾನೆಯ ಮ್ಯಾನೇಜರ್ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸಿ ರೈತ ಸಂಘದಿಂದ ಶುಕ್ರವಾರ ಕಾರ್ಖಾನೆಯ ಬಳಿ ಪ್ರತಿಭಟನೆ ನಡೆಯಿತು.
ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಜೊತೆ ಮ್ಯಾನೇಜರ್ ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಮ್ಯಾನೇಜರ್ ಅವರ ವರ್ತನೆಯನ್ನು ಪ್ರಶ್ನಿಸುವವರಿಗೆ ಕಿರುಕುಳ ನೀಡುತ್ತಿದ್ದಾರೆ. ಕೆಲಸದಿಂದ ಹೊರ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದು ಕಾರ್ಖಾನೆಯ ಮಾಲೀಕರು ಮ್ಯಾನೇಜರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘ ಒತ್ತಾಯಿಸಿದೆ.
ಕಾರ್ಖಾನೆಯಲ್ಲಿ ಮಹಿಳಾ ಕಾರ್ಮಿಕರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ, ಮಹಿಳೆಯರಿಗೆ ಭದ್ರತೆ ಕಲ್ಪಿಸಬೇಕಾದ ಮ್ಯಾನೇಜರ್ ಕಾರ್ಮಿಕ ವಿರೋಧಿ ನೀತಿ ಅನುಸರಿಸಿದರೆ ನಾವು ಯಾರಲ್ಲಿ ನ್ಯಾಯ ಕೇಳಬೇಕೆಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ರೈತ ಸಂಘದ ನರಸಾಪುರ ಹೋಬಳಿ ಅಧ್ಯಕ್ಷ ಮಹೇಶ್‌ಕುಮಾರ್, ಜಿಲ್ಲಾ ಅಧ್ಯಕ್ಷ ನಾರಾಯಣಗೌಡ, ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ, ಮುಖಂಡರಾದ ಮುರಾಂಡಹಳ್ಳಿ ಶಿವಾರೆಡ್ಡಿ, ನಾರಾಯಣಮೂರ್ತಿ, ರೇಹಮಾನ್. ಮಂಜುನಾಥರೆಡ್ಡಿ, ರಂಜಿತ್‌ಕುಮಾರ್, ನರಸಾಪುರ ಪುರುಷೋತ್ತಮ್, ಅಮರ ನಾರಾಯಣಸ್ವಾಮಿ, ಗಣೇಶ್, ಜಯಮ್ಮ, ಮಂಜುಳ, ಲಕ್ಷ್ಮಮ್ಮ, ಭಾಗ್ಯ, ಸರಸ್ಪತಿ ಮುಂತಾದವರು ಇದ್ದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ವೇಮಗಲ್ ಸಬ್‌ಇನ್ಸ್‌ಪೆಕ್ಟರ್ ಯಂಶವಂತ್ ಪ್ರತಿಭಟನಾಕಾರರ ಜೊತೆ ಚರ್ಚಿಸಿದ ಬಳಿಕ ಕಾರ್ಖಾನೆ ಮ್ಯಾನೇಜರ್ ಅವರನ್ನು ಪ್ರತಿಭಟನಾಕಾರರು ನೀಡಿರುವ ದೂರಗಳ ಬಗ್ಗೆ ಗಮನ ನೀಡಿ ಮುಂದೆ ಸೌಹಾರ್ದತೆಯಿಂದ ವರ್ತಿಸುವಂತೆ ಎಚ್ಚರಿಕೆ ನೀಡಿದರಲ್ಲದೆ, ಇದೇ ತಿಂಗಳ 20 ರಂದು ಕಾರ್ಖಾನೆ ಮಾಲೀಕರು ರೈತ ಮುಖಂಡರು ಹಾಗೂ ಕಾರ್ಮಿಕರ ಜೊತೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ನಿವಾರಣೆ ಮಾಡಬೇಕೆಂದು ತಿಳಿಸಿದರು.