ಬರ ಪ್ರದೇಶ ಘೋಷಣೆಗೆ ಆಗ್ರಹ
ಬಂಗಾರಪೇಟೆ: ನಿರಂತರವಾಗಿ ಬರಗಾಲಕ್ಕೆ ಸಿಲುಕಿರುವ ತಾಲೂಕನ್ನು ಕನಿಷ್ಠ 5 ವರ್ಷಗಳ ಕಾಲ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ವಿದರ್ಭ ವಿಶೇಷ ಪ್ಯಾಕೇಜ್ ಮುಖಾಂತರ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು ಮತ್ತು ಕಾಲುಬಾಯಿ ಜ್ವರದಿಂದ ರೈತರ ಜೀವನಕ್ಕೆ ಆಧಾರವಾಗಿದ್ದ ಹಸುಗಳು ಸಾವನ್ನಪ್ಪಿರುವ ಪ್ರತಿ ಕುಟುಂಬಕ್ಕೂ 4ಸಾವಿರ ರು. ಗಳಂತೆ ಸರ್ಕಾರ ಪರಿಹಾರ ಘೋಷಿಸಬೇಕೆಂದು ರೈತ ಸಂಘದ ಮುಖಂಡರು ಆಗ್ರಹಿಸಿ ತಾಲೂಕು ಕಚೇರಿ ಮುಂದೆ ಧರಣಿ ಮಾಡಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಶ್ರೀನಿವಾಸಗೌಡ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಬರಬೇಕು ಮತ್ತು ತಾಲೂಕು ಕಚೇರಿಯಲ್ಲಿ ತಿದ್ದುಪಡಿ ಹೆಸರಿನಲ್ಲಿ ರೈತರನ್ನು ನಿರಂತವಾಗಿ ಶೋಷಣೆ ಮಾಡುತ್ತಿದ್ದು ಸೆರ್ವೆ ಸ್ಕೇಚ್ ಮತ್ತು ಪೋಡಿಯನ್ನು ಸರಿಯಾದ ಸಮಯಕ್ಕೆ ರೈತರಿಗೆ ಒದಗಿಸಬೇಕು ತಾಲೂಕು ಕಚೇರಿಯ ಸಿಬ್ಬಂದಿ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿದರು. ತಾಲೂಕು ಕಚೇರಿ ಸಿಬ್ಬಂದಿ ರೈತ ಜಮೀನು ದಾಖಲೆಗಳನ್ನು ಕಂಪ್ಯೂಟರೀಕರಣಗೊಳಿಸುವಾಗ ದಾಖಲೆಗಳಲ್ಲಿ ಮಾಡಿರುವ ಚಿಕ್ಕ ಪುಟ್ಟ ತಪ್ಪುಗಳ ತಿದ್ದುಪಡಿಗೆ ರೈತರನ್ನು ಎಸಿ ಕಚೇರಿಗೆ ನಿರಂತರವಾಗಿ ವರ್ಷಾನುಗಟ್ಟಲೆ ಅಲೆಸುವುದನನ್ನು ತಪ್ಪಿಸಿ ಚಿಕ್ಕಪುಟ್ಟ ತಪ್ಪುಗಳನ್ನು ತಹಸೀಲ್ದಾರ್ ಮುಖಾಂತರವೇ ರೈತರಿಗೆ ತಿದ್ದುಪಡಿ ಮಾಡಿಕೊಡಬೇಕು.
ಸರ್ವೆ ನಕ್ಷೆಗಾಗಿ ಕಚೇರಿಗೆ ಸುತ್ತಾಡಿಸುತ್ತಿರುವ ಅಧಿಕಾರಿ ವರ್ಗ ವಿರುದ್ಧ ಕ್ರಮ ಕೈಗೊಂಡು ವರ್ಸೆಗೆ ಅರ್ಜಿ ಕೊಟ್ಟ 20ದಿನಗಳ ಒಳಗಾಗಿ ರೈತನಿಗೆ ಸೆರ್ವ ನಕ್ಷೆ ಮತ್ತು ಪೋಡಿ ಕಾಪಿ ಸೇರುವ ವ್ಯವಸ್ಥೆಯನ್ನು ಮಾಡಬೇಕೆಂದು ಒತ್ತಾಯಿಸಿ ಮತ್ತಿತರ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿದರು. ಇದೇ ವೇಳೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಾಲೂಕು ಕಚೇರಿಯಲ್ಲೆ ಇದ್ದರಿಂದ ಅವರಿಗೆ ರೈತರು ಮನವಿ ಪತ್ರವನ್ನು ನೀಡಿದರು. ಐತಾಂಡಹಳ್ಳಿ ಉದಯೇ, ಮರಗಲ್ ಶ್ರೀನಿವಾಸ್, ಹುಲ್ಕೂರು ಹರಿಕುಮಾರ್, ಅರಮೇಶ್, ರಾಘವೇಂದ್ರ, ವೆಂಕಟೇಶಪ್ಪ, ಅಬೀದ್ ಉಲ್ಲಾ, ಚಲಪತಿ, ವಿಶ್ವನಾಥ್ ಇದ್ದರು.