ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಿಜಿಎಸ್ ಶಾಲೆಯಲ್ಲಿ ಮಾತೃಭೋಜನ ವಿಶೇಷ ಕಾರ್ಯಕ್ರಮ

Vishwanath S
Updated On : 16 Nov 2013, 12:57 pm

ಚಿಕ್ಕಬಳ್ಳಾಪುರ: ಇತ್ತೀಚೆಗೆ ಪೋಷಕರ ಕ್ರೀಡಾಕೂಟವನ್ನು ಆಯೋಜಿಸಿ ಗಮನ ಸೆಳೆದಿದ್ದ ತಾಲೂಕಿನ ಅಗಲಗುರ್ಕಿಯ ಬಿಜಿಎಸ್ ಶಾಲೆಯಲ್ಲಿ ಬುಧವಾರ ನಡೆದ ಮಾತೃಭೋಜನ ಕಾರ್ಯಕ್ರಮವು ಜಾತ್ಯತೀತತೆಯನ್ನು ಎತ್ತಿ ತೋರಿಸುವುದರ ಜತೆಗೆ ಅಮ್ಮಂದಿರ ಪ್ರೀತಿಯನ್ನು ಉಣಬಡಿಸುವ ಮೂಲಕ ವಿಶೇಷತೆಯನ್ನು ಮೆರೆಯಿತು.
ಶಾಲೆಯಲ್ಲಿ ಓದುವ ಮಕ್ಕಳ ತಾಯಂದಿರು ಸ್ವಯಂ ತಮ್ಮ ತಮ್ಮ ಮನೆಗಳಿಂದ ವಿಶೇಷವಾದ ತಿಂಡಿ ತಿನಿಸುಗಳನ್ನು ಮಾಡಿಕೊಂಡು ಬಂದಿದ್ದರು. ಆದರೆ ಇವರು ತಮ್ಮ ಮಕ್ಕಳಿಗೆ ಮಾತ್ರ ತಿಂಡಿ ತಿನಿಸುಗಳನ್ನು ಬಡಿಸಲಿಲ್ಲ. ಬದಲಿಗೆ ಬೇರೆ ಬೇರೆ ಮಕ್ಕಳಿಗೂ ಪ್ರೀತಿಯಿಂದ ಬಡಿಸಿದರು.
ಪುಳಿಯೋಗರೆ, ಚಿತ್ರಾನ್ನ, ತರಕಾರಿ ಪಲಾವ್, ಇಡ್ಲಿ, ವಡೆ ಸೇರಿದಂತೆ ಬಗೆಬಗೆಯ ತಿಂಡಿ ತಿನಿಸುಗಳು ಕಂಡು ಬಂದವು. ಶಾಲೆಯ ಆವರಣದಲ್ಲಿ ಸಾಲು ಸಾಲಾಗಿ ಒಂದು ಕಡೆ, ಗುಂಪಾಗಿ ಮತ್ತೊಂದು ಕಡೆ ಕುಳಿತಿದ್ದ ಮಕ್ಕಳಿಗೆ ಊಟವನ್ನು ಬಡಿಸಿದ ಅಮ್ಮಂದಿರು ಪ್ರೀತಿಯಿಂದ ಬಲವಂತ ಮಾಡಿ ತಿನ್ನುವಂತೆ ಮಾಡುತ್ತಿದ್ದರು.ಪ್ರಮುಖವಾಗಿ ನಮ್ಮ ಅಡುಗೆ ಹೇಗೆ ಇದೆ ಎಂದು ಪ್ರಶ್ನೆಗಳೇ ಹೆಚ್ಚಾಗಿ ಕೇಳಿ ಆ ನಂತರ ಬಂದ ಉತ್ತರದಿಂದ ಖುಷಿಪಟ್ಟರು. ಈ ನಡುವೆ ಒಬ್ಬೊಬ್ಬರಾಗಿ ಸಾಲಿನಲ್ಲಿ ಬಂದು ಬಡಿಸುತ್ತಿದ್ದ ಹೆಚ್ಚಿನ ಪದಾರ್ಥಗಳನ್ನು ತಿನ್ನಲು ಸಾಧ್ಯವಾಗದೇ, ಅವರ ಬಲವಂತಕ್ಕೆ ತಿನ್ನಲು ಆಗದೇ ಹಲವರು ಹೊಟ್ಟೆ ತುಂಬಿಸಿಕೊಂಡು ತುಂಬಾ ಕಷ್ಟಪಟ್ಟರು. ಪುಟಾಣಿ ಮಕ್ಕಳಿಗಂತಲೂ ಹೊಸ ವಾತಾವರಣದ ಅನುಭವವಾಯಿತು. ಇಷ್ಟು ದಿನ ಅಮ್ಮ ತಿನ್ನುವಂತೆ ಬಲವಂತ ಮಾಡಿ ತಿನ್ನಿಸುತ್ತಿದ್ದರೆ, ಇದೀಗ ಬೇರೆಯವರು ಬಂದು ಇನ್ನೂ ತಿನ್ನು ಎಂದು ಹೇಳುತ್ತಿದ್ದದ್ದು ಮುಜುಗರಕ್ಕೆ ಕಾರಣವಾಯಿತು.ಮತ್ತೊಂದೆಡೆ ಊಟವನ್ನು ತಯಾರಿಸಿಕೊಂಡು ಬಂದಿದ್ದ ಮಹಿಳೆಯರು ಸಂತೋಷ ಪಟ್ಟು ತೃಪ್ತಿ ವ್ಯಕ್ತಪಡಿಸಿದರು.
ನಲುಗಿದ ವಿದ್ಯಾರ್ಥಿಗಳು: ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತಾದರೂ ಶ್ರೀಗಳು ವಿಳಂಬವಾಗಿ ಆಗಮಿಸಿದರಿಂದ ಹಲವರು ಹಸಿವಿನಿಂದ ಕಾದು ಸುಸ್ತಾದರು.ಮಧ್ಯಾಹ್ನ 1 ಗಂಟೆಗೆ ಬದಲಾಗಿ ಸುಮಾರು 3 ಗಂಟೆವರೆಗೂ ಕಾದು ಅನೇಕರು ಹಸಿವಿನಿಂದ ಬಳಲಬೇಕಾಯಿತು.ಇನ್ನೂ ತಯಾರಿಸಿಕೊಂಡು ಬಂದಿದ್ದ ಬಿಸಿಯಾದ ತಿಂಡಿ ತಿನಿಸುಗಳು ತಣ್ಣಗಾಗುತ್ತಿವೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನೂ ಊಟ ಸೇವಿಸಲು ಸಾಧ್ಯವಾಗಲಿಲ್ಲ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಯಾವಾಗ ಬರುತ್ತಾರೋ ಎಂದು ಎದುರು ನೋಡಿಕೊಂಡು ಹೆಚ್ಚು ಸಮಯ ಕುಳಿತುಕೊಂಡರು.
ಉತ್ತಮ ಕಾರ್ಯಕ್ರಮ: ಮಾತೃಭೋಜನ ಕಾರ್ಯಕ್ರಮವೂ ಪರಸ್ಪರ ಬಾಂಧವ್ಯವನ್ನು ಮೂಢಿಸುವ, ನಿಜವಾದ ಪ್ರೀತಿಯನ್ನು  ಉಣಬಡಿಸುವ ಒಂದು ಉತ್ತಮ ಕಾರ್ಯಕ್ರಮವಾಗಿದ್ದು ಇದನ್ನು ಮುಂದುವರೆಸಿಕೊಂಡು ಹೋಗಬೇಕೆಂದು ರಾಜ್ಯಸಭಾ ಸದಸ್ಯೆ, ಕಲಾವಿದೆ ಜಯಶ್ರೀ ತಿಳಿಸಿದರು. ಬಿಜಿಎಸ್ ಶಾಲೆಯಲ್ಲಿ ನಡೆದ ಮಾತೃಭೋಜನ, ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲೆಗಳಲ್ಲಿ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ, ಏಕತೆ ಸೇರಿದಂತೆ ಒಳ್ಳೆಯ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು.
ಅದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ತಂದೆ ತಾಯಿ, ಗುರುಗಳಿಗೆ ಬೆಲೆಯನ್ನು ಕಟ್ಟಲು ಸಾಧ್ಯವಿಲ್ಲ. ಮಕ್ಕಳು ತಮ್ಮ ತಂದೆ ತಾಯಿಗಳನ್ನು, ಗುರು ಹಿರಿಯರನ್ನು ಪ್ರೀತಿಸಿ ಗೌರವಿಸುವುದನ್ನು ಕಲಿಯಬೇಕು. ಹಾಗೆಯೇ ಹಿರಿಯರು ಮಕ್ಕಳಿಗೆ ಉತ್ತಮ ಮಾರ್ಗದರ್ಶಕರಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅದಿಚುಂಚನಗಿರಿ ಮಠದ ಮಂಗಳಾನಂದನಾಥ ಸ್ವಾಮೀಜಿ, ಶ್ರೀ ಸಿದ್ದೇಶ್ವರನಾಥ ಸ್ವಾಮೀಜಿ, ಪ್ರೊ. ಶಿವರಾಮರೆಡ್ಡಿ, ಶಾಲಾ ಸಿಬ್ಬಂದಿ ವರ್ಗ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement