'ಸದಾ ಕನ್ನಡ ಕಂಪು ಪಸರಿಸಲಿ'
ಚಿಕ್ಕಬಳ್ಳಾಪುರ: ಕನ್ನಡ ರಾಜ್ಯೋತ್ಸವವನ್ನು ಕೇವಲ ನವೆಂಬರ್ ಮಾಸಕ್ಕೆ ಸೀಮಿತಗೊಳಿಸದೆ ನಾಡು ನುಡಿಯ ಅಭಿವೃದ್ಧಿಗೆ ಸದಾ ಶ್ರಮಿಸಬೇಕೆಂದು ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀನಿವಾಸ್ ಹೇಳಿದರು.
ತಾಲೂಕಿನ ಅಣಕನೂರು ಗ್ರಾಮದಲ್ಲಿ ರಂಗನಾಥಸ್ವಾಮಿ ಕನ್ನಡ ಸಂಘದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆಯಾದರೂ ಅದಕ್ಕೆ ಅನುಗುಣವಾಗಿ ಕನ್ನಡದ ಅಭಿವೃದ್ಧಿ ಕೆಲಸಗಳು ಪ್ರತಿನಿತ್ಯ ನಡೆಯುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಕನ್ನಡ ಪರ ಸಂಘಟನೆಗಳು ಶ್ರಮಿಸಬೇಕಾಗಿದೆ ಎಂದರು. ಕೆ.ವಿ. ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ ಎ.ಟಿ. ರಂಗನಾಥಾಚಾರ್ ಮಾತನಾಡಿದರು. ಕನ್ನಡ ರಾಜ್ಯೋತ್ಸದ ಅಂಗವಾಗಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರಮುಖ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ನಾಡಬಾವುಟವನ್ನು ಹಿಡಿದು ಮೆರವಣಿಗೆ ನಡೆಸಲಾಯಿತು. ಎರಡು ಬಾರಿ ರಾಷ್ಟ್ರಪತಿ ಪದಕ ಪಡೆದ ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹ ಅಧೀಕ್ಷಕ ಲಕ್ಷ್ಮಿನಾರಾಯಣಪ್ಪ ಹಾಗೂ ಕೆ.ವಿ. ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ ಎ.ಟಿ. ರಂಗನಾಥಭಟ್ಟಾಚಾರ್ ಅವರನ್ನು ಸನ್ಮಾನಿಸಲಾಯಿತು. ಎ.ಆರ್. ರಾಮಯ್ಯ, ಬಚ್ಚಮ್ಮ, ನರಸಿಂಹರಾಜು, ವೇಣುಗೋಪಾಲ್, ಕೆ. ಮುನಿಶಾಮಿ ಇದ್ದರು.