ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಹಕಾರಿ ಒಕ್ಕೂಟದ ಕಟ್ಟಡಕ್ಕೆ ಉಚಿತ ನಿವೇಶನ

Vishwanath S
Updated On : 16 Nov 2013, 12:56 pm

ಚಿಕ್ಕಬಳ್ಳಾಪುರ; ಜಿಲ್ಲಾ ಸಹಕಾರಿ ಒಕ್ಕೂಟದ ಕಟ್ಟಡ ನಿರ್ಮಾಣಕ್ಕಾಗಿ ಜಿಲ್ಲಾ ಕೇಂದ್ರದಲ್ಲಿ ಉಚಿತ ನಿವೇಶನ ನೀಡುವುದಾಗಿ ರೈತ ಮುಖಂಡ ಯಲುವಹಳ್ಳಿ ಎನ್. ರಮೇಶ್ ಭರವಸೆ ನೀಡಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪಂಡಿತ್ ಜವಾಹರ್‌ಲಾಲ್ ನೆಹರು ಜನ್ಮದಿನದ ಪ್ರಯುಕ್ತ ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳಿ ಹಾಗೂ ಜಿಲ್ಲಾ ಸಹಕಾರಿ ಒಕ್ಕೂಟ ಹಾಗೂ ಜಿಲ್ಲೆಯ ಸಹಕಾರಿ ಸಂಘಗಳ ಸಹಯೋಗದಲ್ಲಿ ಏರ್ಪಡಿಸಿದ್ದ 60ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಭೇದಭಾವ ಇಲ್ಲದೇ ಸಹಬಾಳ್ವೆಯಿಂದ ಸೇವೆ ಸಲ್ಲಿಸುವುದೇ ಸಹಕಾರ ಸಂಘಗಳ ಪ್ರಮುಖ ಉದ್ದೇಶವಾಗಿದೆ. ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಸಹಕಾರಿ ಒಕ್ಕೂಟ ಉತ್ತಮವಾಗಿ ಕಾರ್ಯ ನಿರ್ವಹಿಸಲು ಒಕ್ಕೂಟಕ್ಕಾಗಿ ಕಟ್ಟಡ ನಿರ್ಮಾಣ ಮಾಡುವ ಅವಶ್ಯಕತೆಯಿದ್ದು ಒಕ್ಕೂಟದ ಬೇಡಿಕೆಯಂತೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇರುವ 30, 40 ಅಳತೆಯ ನಿವೇಶನವನ್ನು ಉಚಿತವಾಗಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ಕೆಎಂಎಫ್ ನಿರ್ದೇಶಕ ಕೆ.ವಿ. ನಾಗರಾಜು ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಹಕಾರಿ ಸಂಘಗಳು ಪರಸ್ಪರ ಸಹಕರಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಹಾದಿಯಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಸಹಕಾರ ಸಂಘಗಳ ಚುನಾವಣೆ ಹತ್ತಿರವಾಗುತ್ತಿದ್ದು, ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸಂಘಗಳನ್ನು ಬಲಪಡಿಸಬೇಕು ಎಂದರು. ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಅಧ್ಯಕ್ಷ ಕೆ. ಗುಡಿಯಪ್ಪ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ರಿಯಲ್ ಎಸ್ಟೇಟ್ ಉದ್ಯಮಿಗಳು ಕಾಲಿಡುತ್ತಿದ್ದು ಅವರನ್ನು ಕ್ಷೇತ್ರದಿಂದ ದೂರವಿರಿಸಬೇಕು. ಸಹಕಾರಿ ಸಂಘಗಳಲ್ಲಿ ಆಡಳಿತ ಸುಧಾರಣೆ ಮಾಡುವ ನಿಟ್ಟಿನಲ್ಲಿ ಚುನಾವಣೆಯಲ್ಲಿ ಉತ್ತಮ ನಾಯಕನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು. ಒಕ್ಕೂಟದ ಅಧ್ಯಕ್ಷ ಮಳ್ಳೂರು ಶಿವಣ್ಣ, ಹಾಪ್ ಕಾಮಸ್ ನಿರ್ದೇಶಕ ಜಿ.ಆರ್. ಶ್ರೀನಿವಾಸ್ ಮಾತನಾಡಿದರು. ಕೋಲಾರ ಸಹಾಕರ ಸಂಘದ ಉಪಾಧ್ಯಕ್ಷ ಗೋವಿಂದಪ್ಪ, ನಿರ್ದೇಶಕ ಎನ್. ನಾರಾಯಣಸ್ವಾಮಿ, ಶೋಭಾ ರಮೇಶ್, ಕೌಸಲ್ಯ, ನಾರಾಯಣರೆಡ್ಡಿ, ಡಿಸಿಸಿ ಬ್ಯಾಂಕ್‌ನ ಚಂದ್ರಶೇಖರ್‌ಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement