ಸ್ವಪಕ್ಷೀಯರ ವಿರೋಧ ಬೇಧಿಸಿ ಗೆದ್ದ ಗೌಡ್ರು
ಕೋಲಾರ: ಡಿಸಿಸಿ ಬ್ಯಾಂಕಿಗೆ ನ.15 ರಂದು ನಡೆದ ಚುನಾವಣೆಯಲ್ಲಿ ಹಿರಿಯ ಸಹಕಾರಿ ಹಾಗೂ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಬ್ಯಾಲಹಳ್ಳಿ ಎಂ. ಗೋವಿಂದಗೌಡರು ಸ್ವಪಕ್ಷೀಯರ ವಿರೋಧದ ನಡುವೆಯೂ 38 ಮತಗಳ ಅಂತರದಿಂದ ಗೆದ್ದು ಸಹಕಾರ ಕ್ಷೇತ್ರದಲ್ಲಿ ತಮಗಿರುವ ಬೆಂಬಲ ಸಾಬೀತು ಮಾಡಿದ್ದಾರೆ.
ಗೋವಿಂದಗೌಡರ ವಿರುದ್ಧ ಸ್ಪರ್ಧಿಸಿದ್ದ ಜೆಡಿಎಸ್ ಪಕ್ಷದವರೇ ಆದ ಶ್ರೀನಿವಾಸಪುರ ತಾಲೂಕಿನ ಪುರಹಳ್ಳಿಯ ಪಿ.ಜಿ. ವೆಂಕಟರೆಡ್ಡಿ ಸ್ಪರ್ಧೆಯಿಂದ ಹಿಂದೆ ಸರಿಯಲು ಇಚ್ಚಿಸಿದಾಗ ಜೆಡಿಎಸ್ ಪಕ್ಷದಲ್ಲಿ ಗೋವಿಂದಗೌಡರಿಗೆ ವಿರೋಧಿಗಳಾಗಿರುವ ಕೆಲವರು ವೆಂಕಟರೆಡ್ಡಿಯವರನ್ನು ಕಣದಿಂದ ಹಿಂದೆ ಸರಿಸದೆ ಗೋವಿಂದಗೌಡರ ಸೋಲಿಗೆ ಹರ ಸಹಾಸ ಮಾಡಿದ್ದರು. 173 ಮತಗಳನ್ನು ಹೊಂದಿರುವ ಸಾಮಾನ್ಯ ಡಿ. ವರ್ಗಕ್ಕೆ ಸೇರಿದ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಗೋವಿಂದಗೌಡರು ಸ್ಪರ್ಧಿಸಿ ತಮ್ಮ ಪಕ್ಷದವರ ಬೆನ್ನಿಗೆ ಚೂರಿ ಹಾಕಲು ಯತ್ನಿಸಿದಾಗ ವಿರೋಧಿಗಳನ್ನು ಮಣಿಸಲು ಎಲ್ಲ ಆಸ್ತ್ರಗಳನ್ನು ಬಳಸಿ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡಿದ್ದಾರೆ. ಜೆಡಿಎಸ್‌ನವರು ತಮ್ಮ ವಿರುದ್ಧ ಪ್ರಚಾರ ಮಾಡುತ್ತಿರುವುದನ್ನು ಗಮನಿಸಿದ್ದ ಗೋವಿಂದಗೌಡರಿಗೆ ಕಾಂಗ್ರೆಸ್ ಪಕ್ಷದ ಕೆಲ ಅಪ್ತರು ಪರೋಕ್ಷವಾಗಿ ಬೆಂಬಲ ನೀಡುವ ಮೂಲಕ ಹಿರಿಯ ಸಹಕಾರಿ ಡಿಸಿಸಿ ಬ್ಯಾಂಕಿನಲ್ಲಿ ಪ್ರಾತಿನಿದ್ಯತೆ ಕಾಯ್ದುಕೊಳ್ಳುವುದಕ್ಕೆ ಸಹಕಾರ ನೀಡಿದ್ದಾರೆ. ಗೋವಿಂದಗೌಡರು ಗೆದ್ದರೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಅಕಾಂಕ್ಷಿಯಾಗಬಹುದೆಂದು ಸೋಲಿಸಲು ಇನ್ನಿಲ್ಲದ ಕಸಲತ್ತು ನಡೆಸಿದ್ದ ವಿರೋಧಿಗಳಿಗೆ ಹಿನ್ನಡೆ ಉಂಟಾಗಿದೆ ಎಂದು ಗೌಡರ ಬೆಂಬಲಿಗರು ಪ್ರತಿಕ್ರಿಯಿಸಿದ್ದಾರೆ.