ಕ್ರೀಡಾಂಗಣ ಸೌಲಭ್ಯದ ಬಗ್ಗೆ ಯಾಕೆ ಕುರುಡು?
ಬಂಗಾರಪೇಟೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರೀಡೆಗಳನ್ನು ಪ್ರೋತ್ಸಾಹಿಸಲು ಪ್ರತಿ ತಾಲೂಕು ಕೇಂದ್ರದಲ್ಲಿಯೂ ಉತ್ತಮ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಕೋಟ್ಯಂತರ ವೆಚ್ಚ ಮಾಡುತ್ತಿದೆ. ಆದರೆ ಪಟ್ಟಣದಲ್ಲಿರುವ ಕ್ರೀಡಾಂಗಣವನ್ನು ನೋಡಿದರೆ ಇದು ಕ್ರೀಡಾಂಗಣವೇ ಎಂಬ ಅನುಮಾನ ಮೂಡದಿರದು. ಅಷ್ಟರ ಮಟ್ಟಿಗೆ ಹದಗೆಟ್ಟಿದ್ದರೂ ಕೇಳುವವರೇ ಇಲ್ಲದಂತಾಗಿದೆ.
ಎಲ್ಲಾ ಸರ್ಕಾರಗಳು ಕ್ರೀಡೆಗಳನ್ನು ಹಾಗೂ ಕ್ರೀಡಾಪಟುಗಳನ್ನು ಬೆಳೆಸಲು ಸಕಲ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿಯೂ ಗುಣಮಟ್ಟದ ಕ್ರೀಡಾಂಗಣ ಅಭಿವೃದ್ದಿಗೆ ಕೋಟ್ಯಂತರ ಹಣ ಸುರಿಯುತ್ತಿದೆ. ಆದರೆ ಪಟ್ಟಣದಲ್ಲಿರುವ ಕ್ರೀಡಾಂಗಣ ಯಾವುದೇ ಅಭಿವೃದ್ಧಿಯಾಗದೆ ಮೂಲೆಗುಂಪಾಗಿದೆ. ಇದರಿಂದ ಕ್ರೀಡಾಪಟುಗಳಿಗೆ ಪ್ರತಿನಿತ್ಯ ಅಭ್ಯಾಸಕ್ಕೆ ಸ್ಥಳಾವಕಾಶದ ಕೊರತೆಯಿಂದಾಗಿ ಕ್ರೀಡಾ ಚಟುವಟಿಕೆಗಳೇ ನಶಿಸಿ ಹೋಗುವಂತಾಗಿದೆ. ಇದರಿಂದ ಕ್ರೀಡಾಂಗಣ ಸುತ್ತಲೂ ನಿರ್ವಹಣೆ ಕೊರತೆಯಿಂದಾಗಿ ಗಿಡಗಂಟೆಗಳು ಬೆಳೆದಿದೆ. ವೀಕ್ಷಕರಿಗೆ ಕೂರಲು ಅಳವಡಿಸಿರುವ ಫೆವಿಲಿಯನ್ ಮಾಯವಾಗಿ ಜೆಲ್ಲಿ ಕಲ್ಲುಗಳ ದರ್ಶನವಾಗಿದೆ. ಸುತ್ತಲು ಹಾಕಿರುವ ಬೇಲಿ ಸಹ ಈಗ ಕಳ್ಳಕಾಕರರ ಪಾಲಾಗಿದೆ.
ಅನೈತಿಕ ಚಟುವಟಿಕೆ: ಪೆವಿಲಿಯನ್ ಕೆಳ ಭಾಗದಲ್ಲಿ ನಿರ್ಮಿಸಿರುವ ಕೊಠಡಿಗಳು ಶೌಚಾಲಯವಾಗಿ ಮಾರ್ಪಟ್ಟಿರುವುದರಿಂದ ಕ್ರೀಡಾಂಗಣಕ್ಕೆ ಕಾಲಿಡುತ್ತಿದ್ದಂತೆ ಮೂಗಿಗೆ ಗಬ್ಬುನಾತ ಬಡಿಯುವುದು, ಈ ಕ್ರೀಡಾಂಗಣದ ಉಸ್ತುವಾರಿ ಹೊತ್ತಿರುವ ಪುರಸಭೆ ದಿವ್ಯ ನಿರ್ಲಕ್ಷ್ಯದಿಂದಾಗಿ ಕ್ರೀಡಾಭಿಮಾನಿಗಳು ಪ್ರತಿದಿನ ಪುರಸಭೆ ಅಧಿಕಾರಿಗಳನ್ನು ನೆನೆಯುವಂತಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಕ್ರೀಡಾಂಗಣವನ್ನು ರಕ್ಷಿಸುವ ಸಲುವಾಗಿ ಪೊಲೀಸ್ ಇಲಾಖೆ ಇದರ ಸುತ್ತಲೂ ಗಿಡಗಳನ್ನು ನೆಟ್ಟು ಪ್ರತಿ ಗಿಡಕ್ಕೂ ಗ್ರಿಲ್ಗಳನ್ನು ಅಳವಡಿಸಿದ್ದರು. ಆದರೆ ಇಂದು ಗಿಡಗಳು ನಿರ್ವಹಣೆಯಿಲ್ಲದೆ ಒಣಗಿದೆ. ಪ್ರತಿ ವರ್ಷ ಇದೇ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಸ್ವಾತಂತ್ರ್ಯ ದಿನಾಚರಣೆ ಆಚರಣೆಗೆ ಬಳಸಿಕೊಳ್ಳುವುದು. ಇದಲ್ಲದೆ ತಾಲೂಕು ದಸರಾ ಕ್ರೀಡಾಕೂಟ ಮತ್ತಿತರೇ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಅಧಿಕಾರಿಗಳು ಅದೇ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕೆಂಬ ಕನಿಷ್ಠ ಸೌಜನ್ಯವಿಲ್ಲವೇ ಎಂದು ನಾಗರಿಕರು ಪ್ರಶ್ನಿಸುವಂತಾಗಿದೆ. ಅಂದು ಮಾತ್ರ ಶುಚಿಗೊಳಿಸುವುದು, ನಂತರ ಕಡೆಗಣಿಸುವುದರಿಂದ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಶಾಸಕರೇ ಇತ್ತ ನೋಡಿ...: ಒಮ್ಮೆ ಕ್ರೀಡಾಂಗಣ ಸುತ್ತಲೂ ಜಾಗವನ್ನು ರಕ್ಷಿಸುವ ಸಲುವಾಗಿ ಬೇಲಿಯನ್ನು ಅಳವಡಿಸುವ ಜವಾಬ್ದಾರಿಯನ್ನು ಜಿಪಂ ತಾಂತ್ರಿಕ ಎಂಜಿನಿಯರ್ ವಿಭಾಗಕ್ಕೆ ವಹಿಸಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದ ಅಳವಡಿಸಿದ ವರ್ಷದಲ್ಲೇ ಬೇಲಿ ಮಾಯವಾಗಿದೆ. ಮತ್ತೆ ಕೆಲವು ಕಡೆ ಮುರಿದು ಬಿದ್ದಿದ್ದರೂ ಕೇಳುವವರೇ ಇಲ್ಲ. ಒಟ್ಟಾರೆ ಕ್ರೀಡಾಂಗಣ ಇದ್ದರೂ ಅನುಕೂಲಗಳ ಕೊರತೆಯಿಂದ ಕ್ರೀಡಾಪಟುಗಳಿಗೆ ತೊಂದರೆಯಾಗಿ ಅಭ್ಯಾಸಕ್ಕಾಗಿ ಪಕ್ಕದ ಕ್ಷೇತ್ರಗಳಿಗೆ ಹೋಗುವಂತಾಗಿದೆ. ಈ ಕ್ರೀಡಾಂಗಣ ಪ್ರಗತಿಗೆ ಬಂದ ಅನುದಾನ ಏನಾಗಿದೆ ಎಂಬ ಪ್ರಶ್ನೆಗೆ ಯಾರಿಂದಲೂ ಉತ್ತರವಿಲ್ಲ. ಕ್ಷೇತ್ರವನ್ನು ಮಾದರಿ ಮಾಡುವುದಾಗಿ ಹೇಳಿಕೊಳ್ಳುತ್ತಿರುವ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮೊದಲು ಇರುವ ಏಕೈಕ ಕ್ರೀಡಾಂಗಣ ಅಭಿವೃದ್ಧಿಗೆ ಆಸಕ್ತಿ ತೋರುವರೇ ಎಂದು ಕ್ರೀಡಾಭಿಮಾನಿಗಳು ಎದುರು ನೋಡುತ್ತಿದ್ದಾರೆ.
-- ಕೆ. ರಮೇಶ್