ಜಡಿ ಮಳೆಗೆ ರಾಗಿ ಫಸಲು ಆಹುತಿ
ಬಂಗಾರಪೇಟೆ: ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಜಡಿ ಮಳೆಗೆ ಕಟಾವಿಗೆ ಬಂದಿದ್ದ ರಾಗಿ ಫಸಲು ಈಗ ಆಹುತಿಯಾಗುವಂತಾಗಿದ್ದು, ಇದರಿಂದ ರೈತರಿಗೆ ಲಕ್ಷಾಂತರ ರು. ನಷ್ಟ ಉಂಟಾಗಿ ಮತ್ತೆ ಆತಂಕದಲ್ಲಿ ಮುಗುಳುವಂತಾಗಿದೆ.
ಕಳೆದ 9 ವರ್ಷಗಳಿಂದ ತಾಲೂಕನ್ನು ಆವರಿಸಿದ್ದ ಬರದಿಂದ ಕಂಗೆಟ್ಟಿದ್ದ ರೈತಾಪಿ ವರ್ಗ ನದಿ ನಾಲೆಗಳಿಲ್ಲದ ಜಿಲ್ಲೆಯಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಹೇಗೋ ಕಷ್ಟಪಟ್ಟು ಬೆಳೆದಿದ್ದ ರಾಗಿ ಬೆಳೆ ಈಗ ಎರಡು ದಿನಗಳಿಂದ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ಜಡಿ ಮಳೆಗೆ ಕಟಾವಿನ ಹಂತದಲ್ಲಿರುವ ರಾಗಿ ಬೆಳೆಗೆ ಮಳೆ ಅಡ್ಡಿಯಾಗಿ ಆಹುತಿಯಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಜಡಿ ಮಳೆಯಿಂದಾಗಿ ರಾಗಿ ಅಲ್ಲದೆ ವಾಣಿಜ್ಯ ಬೆಳೆಗಳಾದ ಟೊಮೆಟೋ, ಬತ್ತ, ಹಲಸಂದಿ ಮತ್ತಿತರೆ ಬೆಳೆಗಳಿಗೂ ಹಲವು ರೋಗಗಳು ಅಂಟಿಕೊಂಡು ರೈತರನ್ನು ಭಾದಿಸುತ್ತಿದೆ.
ಈ ಬಾರಿ ತಾಲೂಕಿನಲ್ಲಿ ರಾಗಿ ಬೆಳೆಯನ್ನು ಸಮೃದ್ಧವಾಗಿ ಬೆಳೆಯಲಾಗಿತ್ತು. ಇನ್ನೇನು ಕಟಾವು ಮಾಡಬೇಕು ಎಂದಿದ್ದ ರೈತರಿಗೆ ಕೂಲಿ ಕಾರ್ಮಿಕರ ಅಭಾವದಿಂದಾಗಿ ಹೊಲಗಳಲ್ಲೇ ರಾಗಿ ಬೆಳೆಯನ್ನು ಬಿಟ್ಟಿದ್ದರು. ಅಷ್ಟರಲ್ಲಿ ಜಡಿ ಮಳೆ ಬಂದು ಹೊಲಗಳಲ್ಲೇ ರಾಗಿ ಉದುರಿ ಹೋಗುವಂತಾಗಿ ಲಕ್ಷಾಂತರ ನಷ್ಟ ಉಂಟು ಮಾಡಿದೆ. ರಾಗಿ ಬೆಳೆಗೆ ಈಗ ಉತ್ತಮ ಬೇಡಿಕೆ ಇರುವುದರಿಂದ ಕ್ವಿಂಟಾಲ್‌ಗೆ 2 ಸಾವಿರದಿಂದ 2.500 ವರೆಗೂ ಇದೆ. ಈ ಬೆಳೆಯಲ್ಲಾದರೂ ಒಂದಷ್ಟು ಹಣದ ಮುಖ ನೋಡಬಹುದು ಎಂದು ನಿರೀಕ್ಷೆಯಲ್ಲಿದ್ದ ರೈತರಿಗೆ ಇದು ಕೈ ಕೊಡುವ ಹಂತದಲ್ಲಿದೆ. ಈಗಾಗಲೇ ತಮ್ಮ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬಂದು ಸಾಯುತ್ತಿದ್ದು ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಇದರ ಮಧ್ಯ ಜಡಿ ಮಳೆಗೆ ಬಂಪರ್ ರಾಗಿ ಬೆಳೆ ಸಹ ನಾಶವಾಗುತ್ತಿರುವುದರಿಂದ ಕಷ್ಟಗಳ ಮೇಲೆ ರೈತರು ಕಷ್ಟಗಳನ್ನು ಎದುರಿಸುವಂತಾಗಿದ್ದು, ನಷ್ಟಕ್ಕೊಳಗಾಗಿರುವ ರೈತರ ನೆರವಿಗೆ ಸರ್ಕಾರ ಧಾವಿಸಿ ಪರಿಹಾರ ನೀಡಬೇಕೆಂದು ಪೊಲೇನಹಳ್ಳಿ ಗ್ರಾಮದ ಪ್ರಗತಿಪರ ರೈತ ಟಿ. ಮುನಿರಾಜು ಸರ್ಕಾರವನ್ನು ಒತ್ತಾಯಿಸಿದ್ದಾರೆ.