ಟಾಟಾ ಸಫಾರಿಗೆ ಬೆಂಕಿ; ಮೂವರು ಪಾರು
ಗುಡಿಬಂಡೆ: ತಾಲೂಕಿನ ಗಡಿಭಾಗದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಟಾಟಾ ಸಫಾರಿ ವಾಹನ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ವಾಹನದಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಭಾನುವಾರ ರಾತ್ರಿ 9 ಗಂಟೆ ಸಮಯದಲ್ಲಿ ಸಂಭವಿಸಿದೆ.
ದೊಡ್ಡಬಳ್ಳಾಪುರ ಮೂಲದ ತಿಮ್ಮೇಗೌಡ ಮತ್ತು ಅವರ ಕುಟುಂಬದವರು ಪುಟ್ಟಪರ್ತಿಯಿಂದ ತಮ್ಮ ಊರಿಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಎನ್ಎಚ್ 7ರಲ್ಲಿರುವ ಎಸ್ಎನ್ ಆರ್ ಕನ್ಸ್ಟ್ರಕ್ಷನ್ ಕಟ್ಟಡ ಬಳಿ ಬರುತ್ತಿದ್ದಂತೆ ವಾಹನದಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ತಿಮ್ಮೇಗೌಡ ಮತ್ತು ಅವರ ಪತ್ನಿ, ಮಗು ವಾಹನದಿಂದ ಹೊರಗೆ ಬಂದಿದ್ದು ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಟಾಟಾ ಸಫಾರಿ ವಾಹನ ಸುಟ್ಟು ಹೋಗಿದೆ. ಘಟನೆಯ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದರು. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲೆ ಪ್ರಕರಣ; ಇಬ್ಬರ ಸೆರೆ
ಗುಡಿಬಂಡೆ: ತಾಲೂಕಿನ ಬಂಡ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಚಿಕ್ಕಬಳ್ಳಾಪುರ ತಾಲೂಕಿನ ಕಾಚೂರು ಮಹಿಳೆ ನಾಗರತ್ನಮ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ತಮ್ಮ ಚಿಕ್ಕಮ್ಮನನ್ನೇ ಕೊಲೆ ಮಾಡಲು ಸುಫಾರಿ ಕೊಟ್ಟಿದ್ದರು ಎನ್ನಲಾಗಿದೆ.
ಬಂಧಿತರನ್ನು ಸಹೋದರರಾದ ಬೀರೇಶ್ ಮತ್ತು ರಾಜೇಶ್ ಎಂದು ಗುರುತಿಸಲಾಗಿದೆ. ನಾಗರಾಜ್ ಎಂಬುವವರಿಗೆ ಲಕ್ಷ್ಮಮ್ಮ ಮತ್ತು ನಾಗರತ್ನಮ್ಮ ಇಬ್ಬರು ಪತ್ನಿಯರು. ಭೂಮಿ ಹಂಚಿಕೆ ಸಂಬಂಧಿಸಿದಂತೆ ಗಲಾಟೆ ನಡೆಯುತ್ತಿದ್ದು, ನಾಗರತ್ನಮ್ಮಳಿಗೆ ಆಸ್ತಿ ಹೋಗುತ್ತದೆ ಎಂಬ ದುರಾಲೋಚನೆಯಿಂದ ಬೀರೇಶ್ ಮತ್ತು ರಾಜೇಶ್ ತಮ್ಮ ಚಿಕ್ಕಮ್ಮನನ್ನೇ ಕೊಲೆ ಮಾಡಲು ಸುಫಾರಿ ಕೊಟ್ಟಿದ್ದರು. ಗುಡಿಬಂಡೆ ಸಮೀಪದ ದೇವಸ್ಥಾನಕ್ಕೆ ಚಿಕ್ಕ ಮಗುವಿನ ಜತೆ ಹೋಗಿದ್ದ ಸಂದರ್ಭದಲ್ಲಿ ಆಕೆಯನ್ನು ಕೊಲೆ ಮಾಡಿ ಶವವನ್ನು ಬಂಡ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ ಬಿಸಾಡಲಾಗಿತ್ತು. ಮಗು ಅಳುವುದನ್ನು ಕೇಳಿಸಿಕೊಂಡು ಬಂದು ನೋಡಿದ ಅರಣ್ಯ ರಕ್ಷಕ ಸಿಬ್ಬಂದಿಗೆ ಮಹಿಳೆಯ ಶವದ ಮುಂದೆ ಮಗುವಿರುವುದು ಕಂಡು ಬಂದಿದೆ. ತಕ್ಷಣ ಅವರು ಪೊಲೀಸರಿಗೆ ತಿಳಿಸಿದ್ದು ತನಿಖೆ ಕೈಗೊಂಡು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವರನ್ನು ಬಂಧಿಸಲು ಮುಂದಾಗಿದ್ದಾರೆ.
ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್, ಸಬ್ ಇನ್ಸ್ಪೆಕ್ಟರ್ ನರಸಿಂಹಮೂರ್ತಿ ಮುಂದಿನ ತನಿಖೆ ಕೈಗೊಂಡಿದ್ದಾರೆ.