ನಾಳೆ ಕೋಲಾರಕ್ಕೆ ತೋಟಗಾರಿಕೆ ಸಚಿವ ಭೇಟಿ
ಕೋಲಾರ: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮಾವು ಬೆಳೆಯ ಪ್ರಾತ್ಯಕ್ಷಿಕೆಗಳ ಉತ್ಕೃಷ್ಟತೆ ಹಾಗೂ ತರಬೇತಿ ಕೇಂದ್ರದ ಉದ್ಘಾಟನೆಯನ್ನು ನ.19ರಂದು ಮಧ್ಯಾಹ್ನ 3.30 ಗಂಟೆಗೆ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ ತೋಟಗಾರಿಕೆ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಕೃಷಿ ಮಾರುಕಟ್ಟೆ ಮತ್ತು ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಲಿದ್ದು. ಅಧ್ಯಕ್ಷತೆಯನ್ನು ಶ್ರೀನಿವಾಸಪುರ ಕ್ಷೇತ್ರದ ಶಾಸಕ ಕೆ.ಆರ್. ರಮೇಶ್ ಕುಮಾರ್ ವಹಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾದ(ಸ್ವತಂತ್ರ) ಕೆ.ಹೆಚ್. ಮುನಿಯಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಗಳು ಭಾಗವಹಿಸುವರು.
ಟಾಸ್ಕ್ ಫೋರ್ಸ್ ಸಭೆ
ಕೋಲಾರ: ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ, ಬಿಳಿಜೋಳ, ಮೆಕ್ಕೆ ಜೋಳ ಧಾನ್ಯಗಳನ್ನು ಖರೀದಿಸಲು ಖರೀದಿ ಕೇಂದ್ರಗಳನ್ನು ತೆರೆಯಲು ಸರ್ಕಾರದ ನಿರ್ದೇಶಿಸಿರುವುದರಿಂದ ಜಿಲ್ಲಾ ಟಾಸ್ಕ್ಫೋರ್ಸ್ಸಮಿತಿ ಸಭೆಯನ್ನು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನ.18 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಇಂದು ಸಹಕಾರ ಸಚಿವರ ಭೇಟಿ
ಕೋಲಾರ: ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯ ಸಹಕಾರ ಸಚಿವ ಮಹದೇವ ಪ್ರಸಾದ್ ನ.18ರಂದು ಕೋಲಾರಕ್ಕೆ ಭೇಟಿ ನೀಡಲಿದ್ದಾರೆ. ನಗರಕ್ಕೆ ಬೆಳಗ್ಗೆ 10 ಗಂಟೆಗೆ ಆಗಮಿಸಲಿರುವ ಸಚಿವರು ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ನಂತರ 10.30ಕ್ಕೆ ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ನಡೆಯಲಿರುವ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿದ್ದಾರೆಂದು ಕಾಂಗ್ರೆಸ್ ಮುಖಂಡ ಗೋಪಾಲರೆಡ್ಡಿ ತಿಳಿಸಿದ್ದಾರೆ. ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ ಅವರು ಸಹ ಭಾಗವಹಿಸಲಿದ್ದಾರೆ.
ಮರಳು ದಂಧೆ ಅಡ್ಡೆಗಳಿಗೆ ದಾಳಿ
ಮುಳಬಾಗಲು: ತಾಲೂಕಿನ ವಿವಿಧ ಗ್ರಾಮಗಳ ಮರಳು ದಂಧೆ ಮೇಲೆ ಶನಿವಾರ ಕಂದಾಯ ಮತ್ತು ಲೋಕೋಪಯೋಗಿ ಇಲಾಖೆ ಮರಳು ತಡೆ ಪಡೆ ದಾಳಿ ನಡೆಸಿ 8 ಆಯಿಲ್ ಎಂಜಿನ್ ಮತ್ತು 8 ಅಕ್ರಮ ಮರಳು ಘಟಕಗಳನ್ನು ನಾಶಪಡಿಸಿತು. ದಾಳಿಯಲ್ಲಿ ಕಂದಾಯ ಇಲಾಖೆಯ ಸಿ. ಸುಬ್ರಮಣಿ, ರಾಜರಾಮ್, ವಿನೋದ್, ಲೋಕೋಪಯೋಗಿ ಇಲಾಖೆಯ ಬಾಬು ಭಾಗವಹಿಸಿದ್ದರು. ಮಾರಾಂಡಹಳ್ಳಿ, ಅಣ್ಣಿಹಳ್ಳಿ, ಕೊತ್ತೂರು, ಕೊಂಡತಿಮ್ಮನಹಳ್ಳಿ ಗ್ರಾಮಗಳಲ್ಲಿ ದಾಳಿ ನಡೆಸಲಾಯಿತು.
ಟ್ರ್ಯಾಕ್ಟರ್ ಪಲ್ಟಿ: ಚಾಲಕ ಸಾವು
ಚಿಂತಾಮಣಿ/ ಕೋಲಾರ: ಬಟ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪೂಲಗುಂಟನಹಳ್ಳಿ ಸಮೀಪ ಟ್ರ್ಯಾಕ್ಟರ್ ಪಲ್ಟಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಮೃತ ಟ್ರ್ಯಾಕ್ಟರ್ ಚಾಲಕನನ್ನು ಜುಂಚನಹಳ್ಳಿಯ ಕಲ್ಯಾಣ ಕುಮಾರ್(25) ಎಂದು ಗುರುತಿಸಲಾಗಿದೆ. ಅಪಘಾತಕ್ಕೆ ಅತಿ ವೇಗ, ಅಜಾಗರೂಕತೆಯೇ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.
ಇಂದು ಪಿಜಿ ಸೆಂಟರ್ ಮುಂದೆ ಪ್ರತಿಭಟನೆ
ಕೋಲಾರ: ತಾಲೂಕಿನ ಮಂಗಸಂದ್ರದಲ್ಲಿನ ಬೆಂಗಳೂರು ವಿವಿಗೆ ಸೇರಿದ ಸ್ನಾತಕೋತ್ತರ ಕೇಂದ್ರದ ಕಟ್ಟಡ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ಹಾಗೂ ಕಾಲೇಜಿಗೆ ಮೂಲ ಸೌಲಭ್ಯಗಳನ್ನು ಒದಗಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ನೇತೃತ್ವದಲ್ಲಿ ಸ್ನಾತಕೋತ್ತರ ಕೇಂದ್ರದಲ್ಲಿ ತರಗತಿಗಳನ್ನು ಬಹಿಷ್ಕರಿಸಿ ನ.18ರಂದು ಬೆಳಗ್ಗೆ 10.30ಕ್ಕೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಕೆ. ವಾಸುದೇವರೆಡ್ಡಿ ತಿಳಿಸಿದ್ದಾರೆ.
ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ
ಕೆಜಿಎಫ್: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಶನಿವಾರ ಎಂ. ವೆಂಕಟರಮಣಪ್ಪ ಅವರ ಅಧ್ಯಕ್ಷತೆಯಲ್ಲಿ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು. ಬಿ.ಕೆ. ಚಂದ್ರಪ್ಪ ಅವರ ನೇತೃತ್ವದಲ್ಲಿ ಸದ್ಗುರು ನಾದಬ್ರಹ್ಮ ಸಂಗೀತ ಪಾಠ ಶಾಲೆಯ ಶಿಷ್ಯರಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವಿವಿಧ ಬಡಾವಣೆಗಳಿಂದ ಆಗಮಿಸಿದ ನೂರಾರೂ ಭಕ್ತರು, ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ದರ್ಶನ ಪಡೆದು ನಂತರ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಗೀತೆಗಳನ್ನು ಕೇಳಿ ಆನಂದಿಸಿದರು. ಈ ವೇಳೆ ಪಕ್ಕವಾದ್ಯ ಪಿಟೀಲು ವಿದ್ವಾನ್ ಡಿ. ಸತ್ಯನಾರಾಯಣ, ಮೃದಂಗ ವಿಗ್ವಾನ್ ಪಿಚ್ಚಹಳ್ಳಿ ಎನ್. ಸತ್ಯನಾರಾಯಣ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಗ್ರಾಮಗಳ ದತ್ತು ಪಡೆದ ಬ್ಯಾಂಕ್
ಕೆಜಿಎಫ್: ಸಮೀಪದ ಕಂಬಂಪಲ್ಲಿ, ಚಲ್ದಿಗಾನಹಳ್ಳಿ ಮತ್ತು ದಾಯಮಾನ್ಗುಡಿಸಲು ಮೂರೂ ಗ್ರಾಮಗಳನ್ನು ದತ್ತು ಪಡೆದು ಗ್ರಾಮಗಳಲ್ಲಿ ಅಭಿವೃದ್ದಿ ಮತ್ತು ಮಹಿಳೆಯರಿಗೆ ಸಣ್ಣ ಕೈಗಾರಿಕೆಯನ್ನು ಪ್ರಾರಂಭಿಸಿ ಸಾಲ ನೀಡುವ ಸೌಲಭ್ಯಗಳ ಕುರಿತು ಮೂರು ಗ್ರಾಮಗಳ ಮುಖಂಡರ ಮತ್ತು ಸ್ತ್ರೀಶಕ್ತಿ ಸಂಘಗಳ ಸದಸ್ಯರುಗಳ ಸಭೆ ಪ್ರಗತಿ ಗ್ರಾಮೀಣ ಬ್ಯಾಂಕ್ನ ವ್ಯವಸ್ಥಾಪಕ ಕೆ.ಎಂ. ಬಸವರಾಜು ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಬ್ಯಾಂಕ್ ವ್ಯವಸ್ಥಾಪಕ ಬಸವರಾಜು, ಮೂರು ಗ್ರಾಮಗಳಲ್ಲಿ ಮೊದಲ ಹಂತವಾಗಿ 20 ವಿವಿಧ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಬಾಟ ಗಂಗಮ್ಮ ರೈತ ಸಂಘ ಹೆಸರಿನಲ್ಲಿ ಸಂಘವನ್ನು ನಾಮಕರಣ ಮಾಡಿ ಅದರಲ್ಲಿ ಅಧ್ಯಕ್ಷರಾಗಿ ಬಾಲಸುಬ್ರಮಣ್ಯಂ, ಉಪಾಧ್ಯಕ್ಷರಾಗಿ ಜಯಶಂಕರ್ ಹಾಗೂ ಕಾರ್ಯದರ್ಶಿಯಾಗಿ ಶೌಕತ್ರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಉಚಿತವಾಗಿ ಹಗ್ಗ ನೇಯುವುದು, ಅಪ್ಪಳ ಮಾಡುವುದು, ಬಟ್ಟೆ ನೇಯುವುದು ಸೇರಿದಂತೆ ತರಬೇತಿ ನೀಡುವುದಾಗಿ ತಿಳಿಸಿದರು. ಬ್ಯಾಂಕ್ ಸಿಬ್ಬಂದಿ ಕೊಟ್ರಯ್ಯ, ತಿಪ್ಪೇಸ್ವಾಮಿ ಇದ್ದರು.
ಪದಾಧಿಕಾರಿಗಳ ಆಯ್ಕೆ
ಚಿಂತಾಮಣಿ: ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘಟನೆಯಾದ ಸಿರಿಗನ್ನಡ ವೇದಿಕೆಯ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಎಸ್.ವಸಂತ್, ಅಧ್ಯಕ್ಷರಾಗಿ ಕೆ.ಎನ್.ಅಕ್ರಂಪಾಷ, ಉಪಾಧ್ಯಕ್ಷರಾಗಿ ಸಿ.ವೆಂಕಟರವಣಪ್ಪ, ಕಾರ್ಯದರ್ಶಿಯಾಗಿ ಎಸ್.ಸಿ.ಶ್ರೀನಿವಾಸರೆಡ್ಡಿ, ಸಹಕಾರ್ಯದರ್ಶಿಯಾಗಿ ತ್ಯಾಗರಾಜ್, ಖಜಾಂಚಿಯಾಗಿ ಕೆ.ಕೃಷ್ಣಪ್ಪ ಹಾಗೂ ನಿರ್ದೆಶಕರಾಗಿ ಸತ್ಯಭಾಮ, ರಾಘವೇಂದ್ರ ಈ ಹೊರಬೈಲು, ಎನ್.ಮಸ್ತಾನ್ ವಲಿ ಹಾಗೂ ಹರಿಕಿಶೋರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕನ್ನಡಿಗರಿಂದಲೇ ಕನ್ನಡ ಉದ್ಧಾರ: ನಾರಾಯಣಸ್ವಾಮಿ
ಗೌರಿಬಿದನೂರು: ಕನ್ನಡಿಗರಿಂದಲೇ ಕನ್ನಡ ಉದ್ಧಾರ ಸಾಧ್ಯ ಎಂದು ರಾಜೋತ್ಸವ ಪ್ರಶಸ್ತಿ ವಿಜೇತ ಹಾಗೂ ಜಲ ಮತ್ತು ಶಿಕ್ಷಣ ತಜ್ಞ ಕೆ. ನಾರಾಯಣ ಸ್ವಾಮಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ರೈಲು ನಿಲ್ದಾಣದ ಆವರಣದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಆಟೋ ನಿಲ್ದಾಣ ಹಮ್ಮಿಕೊಂಡಿದ್ದ ಎರಡನೇ ವರ್ಷದ ಕನ್ನಡ ರಾಜೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಗ್ರಾಮಾಂತರ ಉಪ ನಿರೀಕ್ಷಕ ಶಿವಕುಮಾರ್ ಮಾತನಾಡಿ, ಕನ್ನಡತನವನ್ನು ಉಳಿಸಲು ಆಟೋ ಚಾಲಕರಲ್ಲಿ ಶ್ರಮ ಇರುವುದು ಶ್ಲಾಘನೀಯ. ಪ್ರತಿವರ್ಷ ರಾಜೋತ್ಸವ ಆಚರಿಸಿ ಕನ್ನಡದ ಕಂಪು ಹರಡುತ್ತಿರುವುದು ಮೆಚ್ಚುಗೆಯ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಮಂಜುನಾಥ್, ಕರವೇ ಕಾರ್ಯದರ್ಶಿ ಅಶ್ವತ್ಥನಾರಾಯಣ, ಮಹಮದ್ ಬೇಗ್, ಅಶ್ವತ್ಥನಾರಾಯಣ, ಅಕ್ರಮ್ ಪಾಷ(ಆಟೋ ಚಾಲಕರ ಅಧ್ಯಕ್ಷ), ರಾಮರೆಡ್ಡಿ, ಜಮೀರ್, ನಯಾಜ್ ಇದ್ದರು.
ಸಮಾವೇಶ; ಬಸ್ಗೆ ಚಾಲನೆ
ಮಾಲೂರು: ಬೆಂಗಳೂರಿನಲ್ಲಿ ಭಾನುವಾರ ನಡೆಯುವ 'ಭಾರತ ಗೆಲ್ಲಿಸಿ' ಸಮಾವೇಶಕ್ಕೆ ಪಟ್ಟಣದಿಂದ ಹೊರಟಿದ್ದ 30 ಬಸ್ಗಳಿಗೆ ಬಿಜೆಪಿ ತಾಲೂಕು ಅಧ್ಯಕ್ಷ ಸೊ. ವೆಂಕಟೇಶ್ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಜಿ.ಇ. ರಾಮೇಗೌಡ, ಇಡೀ ದೇಶದಲ್ಲಿ ನರೇಂದ್ರ ಮೋದಿ ಹವಾ ಬೀಸುತ್ತಿದ್ದು, ಕಳೆದ 50ಕ್ಕೂ ಹೆಚ್ಚು ವರ್ಷ ಕಾಲ ಕೇಂದ್ರವನ್ನು ಆಳಿದ ಯುಪಿಎ ಸರ್ಕಾರ ನಾಮಾವಶೇಷವಾಗಲಿದೆ. ಕಳೆದ ದಶಕದಿಂದ ಯುಪಿಎ ಸರ್ಕಾರದ ಭ್ರಷ್ಟಾಚಾರ ಕಂಡ ನಮ್ಮಂತಹ ಯುವಕರಿಗೆ ನರೇಂದ್ರ ಮೋದಿ ಆಶಾಕಿರಣವಾಗಿ ಬಂದಿದ್ದು, ಅವರ ಮಾರ್ಗದರ್ಶನದಲ್ಲಿ ಭಾರತ ದೇಶ ಅಭಿವೃದ್ಧಿಯಾಗಬೇಕಾಗಿದೆ ಎಂದರು. ಪುರಸಭೆ ಹಿರಿಯ ಸದಸ್ಯ ಸಿ.ಪಿ. ನಾಗರಾಜ್ ಮಾತನಾಡಿದರು. ತಾ.ಪಂ. ಸದಸ್ಯ ಗೋಪಾಲ್ಗೌಡ, ಆನಂದ್, ಪುರಸಭೆ ಸದಸ್ಯರಾದ ವೇಮನ, ನಂಜುಂಡಪ್ಪ, ವೆಂಕಟೇಶ್, ಬಾರ್ ಸೋಮಣ್ಣ, ಕರವೇ ಅಧ್ಯಕ್ಷ ರಾಮಕೃಷ್ಣಪ್ಪ, ತಿ. ನಾರಾಯಣಸ್ವಾಮಿ, ಶೇಷಗಿರಿ, ಬಾಲಕೃಷ್ಣ, ಕಾರ್ಯಕರ್ತರಿದ್ದರು.