ಕೊಲೆ ಬೆದರಿಕೆ ಹಾಕಿದವರ ಬಂಧಿಸಿ: ಡಿಎಸ್ಎಸ್
ಕೋಲಾರ: ಮೂಢ ನಂಬಿಕೆಗಳ ವಿರುದ್ಧ ದನಿ ಎತ್ತಿರುವ ಹಾಗೂ ಮೌಢ್ಯಗಳ ನಿಷೇಧಕ್ಕೆ ರಾಜ್ಯ ಸರ್ಕಾರ ಕಾಯಿದೆ ತರಲು ನಡೆಸಿರುವ ಯತ್ನಕ್ಕೆ ಬೆಂಬಲ ಸೂಚಿಸಿರುವ ನಿಡುಮಾಮಿಡಿ ಮಹಾಸಂಸ್ಥಾನದ ವೀರಭದ್ರ ಚನ್ನಮಲ್ಲ ಸ್ವಾಮೀಜಿಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕೊಲೆ ಬೆದರಿಕೆ ಹಾಕಿದ್ದು ಸರ್ಕಾರ ಕೂಡಲೇ ಅಂತಹ ವ್ಯಕ್ತಿಗಳನ್ನು ಬಂಧಿಸಬೇಕೆಂದು ದಲಿತ ಸಂಘರ್ಷ ಸಮಿತಿ(ಕರ್ನಾಟಕ)ಯ ಜಿಲ್ಲಾ ಸಂಚಾಲಕ ದೊಡ್ಡಮಲೈ ರವಿ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಿಡುಮಾಮಿಡಿ ಸ್ವಾಮೀಜಿಗಳು ಮೌಡ್ಯ ನಿಷೇಧ ಕಾಯ್ದೆಯನ್ನು ಬೆಂಬಲಿಸಿ ಹೇಳಿಕೆ ನೀಡಿದ ರಾತ್ರಿಯೇ ಅನಾಮಧೇಯ ವ್ಯಕ್ತಿಗಳು ದೂರವಾಣಿ ಮುಖಾಂತರ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿರುವುದನ್ನು ಖಂಡಿಸುವುದಾಗಿ ಹೇಳಿದರು. 12ನೇ ಶತಮಾನದಲ್ಲಿಯೇ ಬಸವಣ್ಣನವರು ವೇದ ಹಾಗೂ ಶಾಸ್ತ್ರಗಳನ್ನು ವಿರೋಧಿಸಿದರು. ಆದರೆ ಅಂದಿನಿಂದ ಇಂದಿನವರೆಗೂ ಈ ಅಚಾರಗಳು ನಡೆಯುತ್ತಲೇ ಬರುತ್ತಿದೆ. ಜನಪರ ಹೋರಾಟಗಳಿಂದ ಬಂದಂತಹ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರ ಶೋಷಣೆ ತಪ್ಪಿಸಲು ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದು ಇದನ್ನು ಸ್ವಾಮೀಜಿಗಳು ಬೆಂಬಲಿಸಿರುವುದು ತಪ್ಪೇ ಎಂದು ಪ್ರಶ್ನಿಸಿದರು.ಸುದ್ದಿಗೋಷ್ಠಿಯಲ್ಲಿ ದಲಿತ ಕಲಾ ಮಂಡಳಿ ರಾಜ್ಯ ಸಂಚಾಲಕ ವಿ. ಯಲ್ಲಪ್ಪ, ತಾಲೂಕು ಸಂಚಾಲಕ ಮುನಿಸ್ವಾಮಿ ಇದ್ದರು.