ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದಾಳಿ ನಡೆಸುವವರಿಗೆ ಕ್ರಿಮಿನಲ್ ಕೇಸು

Rashmi Kasaragodu
Updated On : 27 Nov 2013, 2:14 am

  ಪಾ.ಶ್ರೀ. ಅನಂತರಾಮ್
ಕ.ಪ್ರ.ವಾರ್ತೆ   ಕೋಲಾರ   ನ. 26
ಹುಷಾರ್... ಇನ್ನು ಮುಂದೆ ಕ್ಷುಲ್ಲಕ ಕಾರಣಕ್ಕೆ ಕೈಗಾರಿಕೆಗಳ ಮುಂದೆ ಪ್ರತಿಭಟನೆ ಮಾಡುವುದಾಗಲಿ ಅಥವಾ ದಾಳಿ ಮಾಡಿ ಆಸ್ತಿ-ಪಾಸ್ತಿ ಹಾನಿ ಮಾಡುವಂತಿಲ್ಲ.
ಅಪ್ಪಿ ತಪ್ಪಿ ಕಾನೂನಿನ ಮೇಲೆ ಭಯ-ಭಕ್ತಿ ಇಲ್ಲದೆ ಯಾರಾದರೂ ಭಂಡತನ ಪ್ರದರ್ಶಿಸಿದಲ್ಲಿ ಕ್ರಿಮಿನಲ್ ಕೇಸು ಎದುರಿಸುವುದು ಗ್ಯಾರೆಂಟಿ.
ಅಂದ ಹಾಗೆ ಈ ರೀತಿಯ ಕಠಿಣ ಕ್ರಮಕ್ಕೆ ಮುಂದಾಗಿರುವುದು ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ.
ಯಾವುದಕ್ಕೂ ಒಂದು ಹಿತಿಮಿತಿ ಇರುತ್ತೆ. ನಾವು ಮಾಡಿದ್ದೆಲ್ಲ ಸರಿ ಅಂದುಕೊಂಡು ಉದ್ಧಟತನ ಪ್ರದರ್ಶಿಸಿದರೆ ಕಾನೂನು ಬಿಡಬೇಕಲ್ಲ.
ಶಾಶ್ವತ ನೀರಾವರಿ ಸೌಲಭ್ಯ ಇಲ್ಲದಿದ್ದರೂ ಅನೇಕ ಉದ್ಯಮಿಗಳು ಸರ್ಕಾರ ನೀಡಿರುವ ಭರವಸೆಗಳನ್ನು ನಂಬಿ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಕೋಟಿಗಟ್ಟಲೆ ಬಂಡವಾಳದೊಂದಿಗೆ ಬಂದಿದ್ದಾರೆ.
ನಿಜ. ಈ ಬಂಡವಾಳ ಶಾಯಿಗಳು ಕೈಗಾರಿಕೆಗಳ ಸ್ಥಾಪನೆಗಾಗಿ ಭೂಮಿ ಕೊಟ್ಟ ರೈತರಿಗೆ ಕೆಲಸ ಕೊಡಬೇಕಾದದ್ದು ಧರ್ಮ. ಹಾಗಾಂತ ಕುಟುಂಬದ ಎಲ್ಲ ಸದಸ್ಯರಿಗೂ ಕೆಲಸ ನೀಡುವುದು ಕಷ್ಟ-ಸಾಧ್ಯ. ಅವಕಾಶಗಳು ಇದ್ದರೆ ಸೌಹಾರ್ದಯುತ ಮಾತುಕತೆ, ಗುಣಾತ್ಮಕ ಕೌಶಲ್ಯ ಪ್ರದರ್ಶನ, ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾದ ಶ್ರಮ ಮತ್ತು ಸಹಕಾರದೊಂದಿಗೆ ನ್ಯಾಯ ಸಮ್ಮತವಾಗಿ ಹಕ್ಕು ಚಲಾಯಿಸಿದರೆ ಕೆಲಸ ಕೊಡಲ್ಲವೆಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಕಾನೂನು ಮೀರಿ ಬೇಡಿಕೆಗಳನ್ನು ಮುಂದಿಟ್ಟಲ್ಲಿ ಉದ್ಯಮಿಗಳು ನಿಮ್ಮ ಸಹವಾಸವೇ ಬೇಡವೆಂದು ಆಸ್ತಿಯನ್ನು ಮಾರಾಟ ಮಾಡಿ ಹೋದಲ್ಲಿ ನಷ್ಟವಾಗುವುದು ಜಿಲ್ಲೆಗೆ ಎಂಬುದನ್ನು ಅರಿಯಬೇಕಾಗಿದೆ.
ಜಿಲ್ಲೆಯ ಮಾಲೂರು, ನರಸಾಪುರದಲ್ಲಿ ಈಗಾಗಲೇ ಹತ್ತಾರು ದೊಡ್ಡ ಕಾರ್ಖಾನೆಗಳು ತಲೆ ಎತ್ತಿವೆ. ಅತಿ ಶೀಘ್ರವೇ ವೇಮಗಲ್‌ನಲ್ಲೂ ಕೈಗಾರಿಕೆಗಳು ಸ್ಥಾಪನೆ ಆಗುತ್ತವೆ. ಸ್ಥಳೀಯರಿಗೆ ಹೊಸ ಕೈಗಾರಿಕೆಗಳಲ್ಲಿ ಕೆಲಸ ನೀಡುವುದು ಉದ್ಯಮಿಗಳ ಧರ್ಮ. ಒಂದು ವೇಳೆ ಸರ್ಕಾರ ಮತ್ತು ಜನತೆಯ ಆಶಯಕ್ಕೆ ತಕ್ಕಂತೆ ಉದ್ಯಮಿಗಳು ನಡೆದುಕೊಳ್ಳದಿದ್ದರೆ ಸಮಸ್ಯೆ ನಿವಾರಣೆ ಮಾಡುವುದು ಜಿಲ್ಲಾ ಆಡಳಿತ ಮತ್ತು ಜನಪ್ರತಿನಿಧಿಗಳ ಕರ್ತವ್ಯವಾಗಿದೆ.
ಒಂದು ವೇಳೆ ಉದ್ಯಮಿಗಳು ಕಾನೂನು ಮೀರಿದ್ದಲ್ಲಿ, ಕಾರ್ಮಿಕರನ್ನು ಶೋಷಣೆ ಮಾಡುತ್ತಿದ್ದಲ್ಲಿ ನ್ಯಾಯ ಕೇಳಲು ಮತ್ತು ಪಡೆಯಲು ಅನೇಕ ರೀತಿಯ ಸನ್ಮಾರ್ಗಗಳು ಉಂಟು. ಸಮಸ್ಯೆ ತಮ್ಮಿಂದ ಬಗೆಹರಿಸಿಕೊಳ್ಳಲು ಆಗದಿದ್ದಲ್ಲಿ ಜಿಲ್ಲಾಧಿಕಾರಿಗಳ ಇಲ್ಲವೇ ಜನಪ್ರತಿನಿಧಿಗಳ ಮೂಲಕ ನಿವಾರಣೆ ಮಾಡಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡುವ ಬದಲು ಹೋರಾಟ, ಉದ್ಧಟತನ, ಹಿಂಸಾಚಾರ, ದೌರ್ಜನ್ಯಗಳನ್ನೇ ಅಸ್ತ್ರ ಮಾಡಿಕೊಂಡಲ್ಲಿ ಯಾರು ತಾನೇ ಸಹಿಸಲು ಸಾಧ್ಯ.
ಜಿಲ್ಲೆಯಲ್ಲಿ ಸ್ಥಾಪನೆಯಾಗಿರುವ ಹೊಸ ಕೈಗಾರಿಕೆಗಳ ಮುಂದೆ ನಡೆದಿರುವ ಪ್ರತಿಭಟನೆ, ದಾಳಿಗಳಿಂದ ಈಗಾಗಲೇ ಅನೇಕ ಉದ್ಯಮಿಗಳು ಬೇಸತ್ತಿದ್ದಾರೆ, ನರಸಾಪುರದಲ್ಲಿ ಹೋಂಡಾ ಕಾರು ಉತ್ಪಾದನಾ ಘಟಕ ತೆರೆಯಲು ಮುಂದಾಗಿದ್ದ ಮಾಲೀಕರು ಕೋಲಾರ ಜಿಲ್ಲೆಯ ಸಹವಾಸವೇ ಬೇಡವೆಂದು ನಿರ್ಧರಿಸಿ ಹೋಂಡಾ ಕಾರು ಘಟಕವನ್ನು ಗುಜರಾತ್ ರಾಜ್ಯದಲ್ಲಿ ಸ್ಥಾಪಿಸಲು ತಯಾರಿ ನಡೆಸಿದ್ದಾರೆ. ಅದೇ ರೀತಿ ವೇಮಗಲಲ್ಕೈಗಾರಿಕಾ ಪ್ರದೇಶದಲ್ಲಿ ಹೀರೋ ಸೈಕಲಲ್ಘಟಕ ಆರಂಭಕ್ಕೆ ಮುಂತಾಗಿದ್ದ ಉದ್ಯಮಿ ಗಲಾಟೆಗಳಿಗೆ ಹೆದರಿ ಘಟಕವನ್ನು ಧಾರವಾಡದಲ್ಲಿ ತೆರೆಯಲು ನಿರ್ಧರಿಸಿದ್ದಾರೆ.
ಇದರಿಂದ ಯಾರಿಗೆ ನಷ್ಟ: ಯಾರಿಗೆ ಲಾಭ ಎಂಬುದನ್ನು ಸ್ವಯಂ ಘೋಷಿತ ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕಾಗಿದೆ.ಬಂಡವಾಳ ಹಾಕಿ ನಿರ್ಮಿಸಿರುವ ಕಾರ್ಖಾನೆಯನ್ನು ದ್ವಂಸ ಮಾಡುವುದರಿಂದ, ಸಾಧಿಸುವುದಾದರೂ ಏನು. ಕಳೆದ ಎರಡು ದಿನಗಳ ಹಿಂದೆ ನಡೆದ ಉದ್ಯೋಗ ಮೇಳದಲ್ಲಿ 16 ಸಾವಿರ ಜನರು ಭಾಗವಹಿಸಿದ್ದರೂ ಕೆಲಸ ಸಿಕ್ಕಿರುವುದು ಕೇವಲ 1464 ಜನರಿಗೆ ಮಾತ್ರ. ಕೌಶಲ್ಯ ಮತ್ತು ಅನುಭವ ಇಲ್ಲದಿದ್ದರೆ ಏನೇ ದೊಡ್‌ಡ ಹುದ್ದೆ ಗಿಟ್ಟಿಸಿಕೊಂಡರೂ ಯಶಸ್ವಿಯಾಗುವುದು ಕಷ್ಟ. ಈ ನಗ್ನ ಸತ್ಯವನ್ನು ಅರ್ಥ ಮಾಡಿಕೊಂಡು ಹೋರಾಟಗಾರರು ತಮ್ಮ ಹಕ್ಕುಗಳನ್ನು ಮಂಡಿಸಬೇಕಾಗಿದೆ. ಹೋರಾಟಗಳಿಂದಲೇ ಸಮಸ್ಯೆ ನಿವಾರಣೆ ಸಾಧ್ಯವೆಂದು ಕಾನೂನು ಸುವ್ಯವಸ್ಥೆಗೆ ಭಂಗ ತರುವುದಕ್ಕಿಂತ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅಲ್ಲೂ ನ್ಯಾಯ ಸಿಗದಿದ್ದ ಪಕ್ಷದಲ್ಲಿ ನ್ಯಾಯಸಮ್ಮತ ಹಾಗೂ ಶಾಂತಿಯುತ ಪ್ರತಿಭಟನೆ ಮಾಡಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಉದ್ಯೋಗ ಮೇಳದ ಮುನ್ನಾ ದಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಬಡವೆ ಕೈಗಾರಿಕೆಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದು ಸ್ವಯಂ ಘೋಷಿತ ಹೋರಾಟಗಾರರಿಗೆ ಎಚ್ಚರಿಕೆಯ ಗಂಟೆಯೂ ಹೌದು. ಹದ್ದುಮೀರಿದರೆ ರೌಡಿ ಶೀಟರ್‌ನಲ್ಲಿ ಇತಿಹಾಸ ದಾಖಲು ಆಗಿ, ಉಜ್ವಲ ಭವಿಷ್ಯ ಮೂರಾಬಟ್ಟೆ ಆಗಬಹುದು ಎಚ್ಚರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement