ನಿಡುಮಾಮಿಡಿ ಶ್ರೀ ಕಾಂಗ್ರೆಸ್ ಏಜೆಂಟ್: ಲಕ್ಷ್ಮೀನಾರಾಯಣ
ಬಾಗೇಪಲ್ಲಿ: ನಿಡುಮಾಮಿಡಿ ಚನ್ನಮಲ್ಲ ಸ್ವಾಮಿಜಿ ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಗೂಳೂರು ಲಕ್ಷ್ಮೀನಾರಾಯಣ ಆರೋಪಿಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಢನಂಭಿಕೆ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲವಾಗಿ ನಿಡುಮಾಮಿಡಿ ಸ್ವಾಮೀಜಿ ನಿಂತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ದಲಿತರ ಪರವಾಗಿ ಕೆಲಸ ಮಾಡುತ್ತಿದ್ದೇನೆ ಎನ್ನುವ ಸ್ವಾಮೀಜಿ, ಎಷ್ಟು ದಲಿತರಿಗೆ ಸೇವೆ ಮಾಡಿದ್ದಾರೆ ಎನ್ನುವುದನ್ನು ಅಂಕಿ-ಅಂಶಗಳ ಸಮೇತ ತಿಳಿಸಲಿ ಎಂದು ಆಗ್ರಹಿಸಿದರು. ಮೂಢನಂಬಿಕೆ ಪ್ರತಿಬಂಧ ಕಾಯ್ದೆಯನ್ನು ಜಾರಿಗೊಳಸಿಬೇಕೆನ್ನುವ ಆಶಯ ಅವರಿಗಿದ್ದರೆ ಮೊದಲು ಅವರು ಕಾವಿ ಬಟ್ಟೆ ಬಿಟ್ಟು ಮಾಮೂಲಿ ಬಟ್ಟೆಯನ್ನು ಧರಿಸಿ ಓಡಾಡಲಿ, ಶಾಸ್ತ್ರ ಹೇಳುವುದನ್ನು,ಪೂಜೆ ಮಾಡುವುದನ್ನು ನಿಲ್ಲಿಸಲಿ ಎಂದು ಆಗ್ರಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಚೌಡರೆಡ್ಡಿ ಮಾತನಾಡಿದರು. ಬಿಜೆಪಿ ಮುಖಂಡರಾದ ಜಿ.ವಿ.ಕೃಷ್ಣಯ್ಯ, ಮಲ್ಲಿಕಾರ್ಜುನರೆಡ್ಡಿ, ಬಾಬಾಜಾನ್, ಅಂಬರೀಷ್, ಮಂಜುಳ, ಮಂಜುಳಾ ಬಾಯಿ, ಸುಜಾತ ಮತ್ತಿತರರು ಉಪಸ್ಥಿತರಿದ್ದರು.