ಪರಿಹಾರಕ್ಕೆ ಆಗ್ರಹಿಸಿ ಸಂತ್ರಸ್ತರಿಂದ ಡಿ.2ರಿಂದ ಅಹೋರಾತ್ರಿ ಧರಣಿ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ನ. 26
ರಾಷ್ಟ್ರೀಯ ಹೆದ್ದಾರಿ 7 ಅಗಲೀಕರಣ ಮತ್ತು ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡಿರುವ ಕೃಷಿ ಭೂಮಿಗೆ ಸಮರ್ಪಕವಾಗಿ ಪರಿಹಾರ ವಿತರಣೆ ಮಾಡಿಲ್ಲ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ದನಕರುಗಳ ಸಮೇತ ಡಿ.2 ರಿಂದ ಅಹೋರಾತ್ರಿ ಧರಣಿ ನಡೆಸಲು ರೈತರು ಮುಂದಾಗಿದ್ದಾರೆ.
ನಗರದ ಪ್ರವಾಸಿಮಂದಿರದಲ್ಲಿ ಸಭೆ ಸೇರಿ ಚರ್ಚೆ ನಡೆಸಿದ ಭೂಮಿ ಕಳೆದುಕೊಂಡ ರೈತರು, ಪರಿಹಾರ ವಿತರಣೆಯಲ್ಲಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿರುವ ಅಧಿಕಾರಿಗಳ ಧೋರಣ್ನೆ ಖಂಡಿಸಿ ಡಿ.2 ರಿಂದ ಅಹೋರಾತ್ರಿ ಧರಣಿ ನಡೆಸುವ ಮೂಲಕ ಜಿಲ್ಲಾಡಳಿತದ ಮೇಲೆ ಒತ್ತಡ ಹೇರಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ರೈತರ ಕೃಷಿ ಜಮೀನುಗಳನ್ನು ವಶಪಡಿಸಿಕೊಂಡು 5 ವರ್ಷಗಳು ಕಳೆದರೂ ಸಹ ನ್ಯಾಯಯುತ ಪರಿಹಾರ ವಿತರಿಸದೇ ಹೆದ್ದಾರಿ ಪ್ರಾಧಿಕಾರ ಮತ್ತು ಸರ್ಕಾರ ರೈತರನ್ನು ವಂಚಿಸಿದ್ದು ಇದರ ವಿರುದ್ಧ ಅನೇಕ ರೀತಿಯಲ್ಲಿ ಹೋರಾಟಗಳನ್ನು ನಡೆಸಿಕೊಂಡು ಬಂದರೂ ಸಹ ಸಮರ್ಪಕವಾಗಿ ಪರಿಹಾರ ಸಿಕ್ಕಿಲ್ಲ. ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಸೇರಿದಂತೆ ಅನೇಕರಿಗೆ ಮನವಿ ಪತ್ರಗಳನ್ನು ಸಲ್ಲಿಸಿರುವುದು ಪ್ರಯೋಜನಕ್ಕೆ ಬಾರದಂತಾಗಿದ್ದು ಡಿ.2 ರಿಂದ ದನಕರುಗಳ ಸಮೇತ ಅಹೋರಾತ್ರಿ ಧರಣಿ ನಡೆಸಲಾಗುವುದು. ಆಗಲೂ ಸ್ಪಂದಿಸದಿದ್ದಲ್ಲಿ ಮುಂದೆ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ರೈತರಾದ ಮನೋಹರ್, ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ಅಶೋಕ್‌ಕುಮಾರ್, ಇಂದ್ರಾರೆಡ್ಡಿ, ಆನಂದ್, ನರಸಿಂಹಮೂರ್ತಿ, ಆನಂದಮೂರ್ತಿ, ದೊಡ್ಡಕೆಂಪಣ್ಣ, ನಾರಾಯಣಸ್ವಾಮಿ, ಕೃಷ್ಣಪ್ಪ ಇದ್ದರು.